ಮಂಗಳೂರು: ಅಡಿಕೆ ಮರ ಏರಲು ಕ್ಯಾಂಪ್ಕೋ ಶಿಬಿರವೊಂದನ್ನು ಸಂಘಟಿಸಿದೆ. ಒಂದಲ್ಲ ಎರಡು ಶಿಬಿರ ಏರ್ಪಡಿಸಿತು. ಶಿಬಿರಕ್ಕೆ ಸಿಕ್ಕಿದ ಸ್ಪಂದನೆಯು ಕೃಷಿ ವಲಯದಲ್ಲಿ ಯುವಕರಿಗೆ ಭರವಸೆ ಮೂಡಿಸಿದೆ.
ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ಸಮಸ್ಯೆ ನಿವಾರಣೆಗೆ ಕ್ಯಾಂಪ್ಕೋ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಡಿಕೆ ಮರ ಏರುವ ಹಾಗೂ ಔಷಧಿ ಸಿಂಪಡಣೆಯ ತರಬೇತಿ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಮೊದಲ ಬಾರಿಗೆ ನಡೆಸಿದ ಶಿಬಿರದಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾದ ಹಿನ್ನೆಲೆಯಲ್ಲಿ ಎರಡನೇ ಶಿಬಿರವನ್ನು ವಿಟ್ಲ ಸಿಪಿಸಿಆರ್ಐ ವಠಾರದಲ್ಲಿ ಆಯೋಜನೆ ಮಾಡಲಾಗಿತ್ತು. ಅಡಿಕೆ ಕೌಶಲ್ಯ ಪಡೆ ಎಂಬ ಹೆಸರಿನಲ್ಲಿ ನಡೆಯುವ ಈ ಶಿಬಿರದಲ್ಲಿ ಅಡಿಕೆ ಮರ ಏರುವ ಹಾಗೂ ಅಡಿಕೆ ಕೊಯ್ಲು , ಔಷಧಿ ಸಿಂಪಡಣೆಯ ಬಗ್ಗೆ ಪ್ರಾಥಮಿಕ ಜ್ಞಾನ ನೀಡುವ ಕಾರ್ಯ ನಡೆಯುತ್ತಿದೆ. ಇದರಲ್ಲಿ ಅಡಿಕೆ ಮರ ಏರುವುದು ಮಾತ್ರವಲ್ಲ ತಳೆಕಟ್ಟುವುದು, ಕೊಟ್ಟೆ ಮಣೆ ಸಿದ್ಧತೆ, ಕೊಕ್ಕೆ ಕಟ್ಟುವುದು, ಸೆಂಟರ್ಪ್ಯಾಡ್ ತಯಾರಿ, ಕೊಕ್ಕೆಯ ಹಲ್ಲು ಸಿದ್ಧತೆ, ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು…. ಹೀಗೆ ವಿವಿಧ ತರಬೇತಿಗಳು ನಡೆಯುತ್ತಿದೆ. ಇದಕ್ಕಾಗಿಯೇ 5 ಜನ ತರಬೇತುದಾರರು ಹಾಗೂ ಒಬ್ಬರು ಮುಖ್ಯ ತರಬೇತುದಾರರು ಇದ್ದಾರೆ. ಮೊದಲನೇ ಶಿಬಿರದಲ್ಲಿ 30 ಯುವಕರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಎರಡನೇ ಶಿಬಿರದಲ್ಲಿ 25 ಮಂದಿ ಯುವಕರು ತರಬೇತಿ ಪಡೆದಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಯುವಕರು ತರಬೇತಿ ಪಡೆದಿದ್ದಾರೆ. ಶಿಬಿರದಲ್ಲಿ ವಿಶೇಷವಾಗಿ ನಗರದಲ್ಲಿದ್ದು ಕೃಷಿಗೆ ಮರಳಿದ ಯುವಕರು ತರಬೇತಿ ಪಡೆದದ್ದು ಕಂಡುಬಂದಿದೆ.
ಬೆಳ್ತಂಗಡಿ ತಾಲೂಕಿನ ಬಂದಾರಿನ ನವೀನ್ ಪ್ರಕಾಶ್ ಇದ್ದಾರೆ. ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಡಿಪ್ಲೊಮಾ ಪಡೆದು ವಿವಿಧ ಕಂಪನಿಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದು ಇದೀಗ 2 ವರ್ಷದಿಂದ ಕೃಷಿಗೆ ಮರಳಿರುವ ನವೀನ್ ಕ್ಯಾಂಪ್ಕೋ ಏರ್ಪಡಿಸಿರುವ ಶಿಬಿರದಲ್ಲಿ ತರಬೇತಿ ಪಡೆದಿದ್ದಾರೆ. ಕೃಷಿಯೇ ಬದುಕಿಗೆ ಆಧಾರ ಎಂದು ನಂಬಿರುವ ನವೀನ್ ಕಳೆದ 2 ವರ್ಷದಿಂದ ರಬ್ಬರ್ ಟ್ಯಾಪಿಂಗ್ ಸಹಿತ ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಬೇಸಾಯವನ್ನೂ ಮಾಡುತ್ತಿದ್ದಾರೆ. ನಗರದ ಬದುಕಿಗಿಂತ ಕೃಷಿಯೇ ಹೆಚ್ಚು ಆಪ್ತ ಎನ್ನುವ ಅವರು ಗ್ರಾಮೀಣ ಭಾಗದ ಜನರಲ್ಲಿ ಜಗರವೇ ಶ್ರೇಷ್ಠ ಎನ್ನುವ ಮನಸ್ಥಿತಿ ಬದಲಾಗಬೇಕು ಎನ್ನುತ್ತಾರೆ. ಇಂತಹ ಶಿಬಿರ ನಮಗೆ ಸ್ಫೂರ್ತಿ ನೀಡಿದೆ ಎನ್ನುತ್ತಾರೆ ಈ ಯುವಕ.
ಇದೀಗ ಮತ್ತೆ ಪೆರ್ಲ ಸಹಕಾರಿ ಸಂಘದ ಮೂಲಕ ಇನ್ನೊಂದು ತರಬೇತಿ ಶಿಬಿರ ಆಯೋಜನೆಗೊಂಡಿದೆ. ಕೃಷಿ ವಲಯಕ್ಕೆ ಇಂತಹದ್ದೊಂದು ತರಬೇತಿ ಶಿಬಿರವು ಹೊಸ ಭರವಸೆ ಮೂಡಿಸಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
previous post