ಬಂಟ್ವಾಳ: ನಾಲ್ಕು ವರ್ಷದ ಹಿಂದೆ ಈ ಶಾಲೆಯ ಮಕ್ಕಳ ಸಂಖ್ಯೆ 32. ಇಂದು 520..!. ಈಗಲೂ ಅರ್ಜಿ ಬರುತ್ತಿದೆ, ನಮ್ಮ ಮಕ್ಕಳನ್ನು ಸೇರಿಸಿ ಎಂದು ಹೆತ್ತವರು ಮನವಿ ಮಾಡುತ್ತಿದ್ದಾರೆ. ಮಕ್ಕಳನ್ನು ಹೇಗೆ ಕುಳ್ಳಿರಿಸುವುದು ಎನ್ನುವುದೇ ಈಗ ಶಾಲೆಯ ಮುಖ್ಯೋಪಾಧ್ಯಾಯರಿಗೆ ಚಿಂತೆ..!.
ಇದು ಬಂಟ್ವಾಳ ತಾಲೂಕಿನ ಮೂಡುನಡುಗೋಡು ಎಂಬಲಿನ ದಡ್ಡಲಕಾಡು ಪ್ರಾಥಮಿಕ ಶಾಲೆಯ ಕತೆ ಇದು. ಕೇವಲ ಬಾಯಿಮಾತಿನ ಸಾಧನೆ ಇಲ್ಲದ. ಸಾಧಿಸಿ ತೋರಿಸಿದ ಯುವಕರ ತಂಡವೊಂದರ ಯಶೋಗಾಥೆ ಇದು. ಬಂಟ್ವಾಳ ತಾಲೂಕಿನ ಮೂಡುನಡುಗೋಡು ದಡ್ಡಲಕಾಡು ಎಂಬಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಬಂದ್ ಆಗಬೇಕಿದ್ದ ಶಾಲೆಯಲ್ಲೀಗ ವಿದ್ಯಾರ್ಥಿಗಳ ಕಲರವ ಕೇಳುತ್ತಿದೆ.
ಶಾಲೆ ಸರಕಾರದ್ದಿರಬಹುದು. ಆದರೆ ಇದನ್ನು ದತ್ತು ತೆಗೆದುಕೊಂಡು ಹೊಸರೂಪ ನೀಡಿದವರು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್. ಸಾಮಾನ್ಯವಾಗಿ ಖಾಸಗಿ ಶಾಲೆಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ದಿನಗಳಿವು. ಆದರೆ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೀಗ ಖಾಸಗಿ ಶಾಲೆಗೆ ಕಡಿಮೆಯೇನಿಲ್ಲ ಎಂಬಂತೆ ಪ್ರಗತಿಪಥದಲ್ಲಿದೆ.
ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅನಿಸತೊಡಗಿದ್ದಾಗಲೇ ಶ್ರೀ ದುರ್ಗಾ ಫ್ರೆಂಡ್ಸ್ ಶಾಲೆಯನ್ನು ದತ್ತು ತೆಗೆದುಕೊಂಡಿತು. ಯಾವುದೇ ಕಾರಣಕ್ಕೂ ಶಾಲೆ ಮುಚ್ಚಬಾರದು ಎಂಬ ಕಾಳಜಿಯಿಂದ ಶಿಕ್ಷಕರನ್ನು ನೇಮಿಸಿ, ತಮ್ಮ ಖರ್ಚಿನಿಂದಲೇ ಅವರ ವೇತನ ಭರಿಸಿ, ಶಾಲೆಯಲ್ಲಿ ಮಕ್ಕಳ ಕೊರತೆಯಾಗದಂತೆ ನೋಡಿಕೊಂಡರು. ತನ್ನ ಸೇವೆ ಇಷ್ಟಕ್ಕೆ ಸೀಮಿತಗೊಳಿಸದೆ ಕ್ಲಬ್ ಮೂಲಕ ಜಿಲ್ಲೆಯಷ್ಟೇ ಅಲ್ಲ, ಹೊರರಾಜ್ಯಗಳ ಬಹುತೇಕ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪಾಸಿಟಿವ್ ವಿಚಾರಗಳನ್ನು ಪಡೆಯುವ ಕಾರ್ಯದಲ್ಲೀಗ ದುರ್ಗಾ ಫ್ರೆಂಡ್ಸ್ ಸದಸ್ಯರು ಇದ್ದಾರೆ.
ಇಲ್ಲಿ ವಿದ್ಯಾರ್ಥಿಗಳ ಕೊರತೆಯನ್ನು ಮನಗಂಡು ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟವರು ಕ್ಲಬ್ನ ಅಧ್ಯಕ್ಷ, ಉದ್ಯಮಿ ಪ್ರಕಾಶ್ ಅಂಚನ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ದಡ್ಡಲಕಾಡು ಸರಕಾರಿ ಶಾಲೆಗೆ ಮೊದಲು ಸೇರಿಸಿದರು. ತನ್ನ ಸಹೋದರನ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ನ ಸದಸ್ಯರ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಿಂದ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಊರಿನ ಮಂದಿಗೆ ಹೇಳಿದರು, ಫ್ರೆಂಡ್ಸ್ ಕ್ಲಬ್ ಸದಸ್ಯರಿಗೆ ಹೇಳಿದರು. ಈ ಪ್ರಯತ್ನದ ಫಲವಾಗಿ 33 ಮಕ್ಕಳಿದ್ದು ಮುಚ್ಚುವ ಭೀತಿಯಲ್ಲಿದ್ದ ಶಾಲೆಯಲ್ಲಿ ಇಂದು 500 ಮಂದಿ ಮಕ್ಕಳಿದ್ದಾರೆ ಎನ್ನುವುದು ವಿಶೇಷ. ಸರಕಾರಿ ಶಾಲೆಯ ವಿದ್ಯಾರ್ಥಿಗಳು ಸುಲಲಿತವಾಗಿ ಇಂಗ್ಲೀಷ್ ಮಾತನಾಡ ಬೇಕು ಎನ್ನುವ ಹಿತದೃಷ್ಟಿಯಿಂದ 9 ಮಂದಿ ಶಿಕ್ಷಕರನ್ನು ನೇಮಿಸಿ ಅವರಿಗೆ ತನ್ನ ಸ್ವಂತ ಖರ್ಚಿನಿಂದಲೇ ವೇತನ ಪಾವತಿಸುತ್ತಿದ್ದಾರೆ. ಉಚಿತ ಪುಸ್ತಕ, ಸಮವಸ್ತ್ರ ದೊಂದಿಗೆ ಮಕ್ಕಳನ್ನು ಕರೆದೊಯ್ಯಲು ವ್ಯಾನ್ನ ವ್ಯವಸ್ಥೆ ಒದಗಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಸಹಕರಿಸುತ್ತಿದ್ದಾರೆ.
ಇನ್ನೊಂದು ವಿಶೇಷ ಎಂದರೆ ಈ ಶಾಲೆಯ ಆಸುಪಾಸಿನಲ್ಲಿ 7 ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಇವೆ. 10 ಕ್ಕೂ ಹೆಚ್ಚು ಶಾಲೆಯ ಬಸ್ಸುಗಳು ಓಡಾಡುತ್ತವೆ. ಹೀಗಿದ್ದರೂ ಶಾಲೆಯ ಸಾಧನೆ ಹಾಗೂ ಶಿಕ್ಷಣದ ಮಟ್ಟ ಗಮನಿಸಿ ಈ ಬಾರಿ ಈ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಇದೀಗ ದಡ್ಡಲಕಾಡು ಶಾಲೆ ಊರಿಗೆ ಮಾತ್ರವಲ್ಲ ರಾಜ್ಯಕ್ಕೆ ಮಾದರಿಯಾಗಿದೆ.