ಸುಳ್ಯ: ಬಳೆ ತೊಡುವ ಕೈಗಳು ದೇಶವನ್ನೂ ಆಳಬಲ್ಲುದು, ಆಕಾಶದಲ್ಲಿ ವಿಮಾನವನ್ನೂ ಚಲಾಯಿಸಬಲ್ಲುದು ಎಂದು ಹಲವಾರು ಮಂದಿ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಇದೀಗ ಆಕಾಶದೆತ್ತರಕ್ಕೆ ಬೆಳೆದು ನಿಂತ ಅಡಿಕೆ ಮರದ ತುತ್ತ ತುದಿಗೆ ಏರಿ ಬಲು ನಾಜೂಕಿನಿಂದ ಔಷಧವನ್ನೂ ಸಿಂಪಡಿಸಿ ಕೃಷಿಯನ್ನೂ ರಕ್ಷಿಸಬಲ್ಲದು ಎಂಬುದನ್ನು ಇಲ್ಲೊಬ್ಬ ಮಹಿಳೆ ಸಾಬೀತು ಮಾಡಿದ್ದಾರೆ. ಏನಿದು ಸಾಧನೆ ಎಂಬುದನ್ನು ಇಲ್ಲಿ ಓದಿ.
ಅಡಿಕೆ ಮರವೇರಿ ಔಷಧ ಸಿಂಪಡಿಸುವುದು ಇವರಿಗೆ ಅತ್ಯಂತ ಸಲೀಸು. ಬಲು ತ್ರಾಸದಾಯಕ ಮತ್ತು ಸಾಹಸಮಯವಾದ ಅಡಿಕೆ ಮರವೇರಿ ಔಷಧ ಸಿಂಪಡಿಸುವ ಕೆಲಸ ಮಾಡಿ ಗಮನ ಸೆಳೆಯುತ್ತಾರೆ ಸುಳ್ಯ ಅಡ್ಕಾರು ಕೋನಡ್ಕಪದವಿನ ಚಂದ್ರಲೇಖ ಎಂಬ ಮಹಿಳೆ. ಅಡಿಕೆ ಮರವನ್ನು ಏರಿ ಮರದ ಮೇಲೆ ನಿಂತು ಕಂಟ್ರೋಲರ್ ಹಿಡಿದು ಔಷಧ ಸಿಂಪಡಿಸುವುದು ಪುರುಷರು ಮಾತ್ರ ಮಾಡುವ ಕೆಲಸ. ಪುರುಷರಿಗೂ ಎಲ್ಲರಿಂದಲೂ ಸಾಧ್ಯವಾಗದ ಬಲು ಧೈರ್ಯ ಮತ್ತು ಕೌಶಲ್ಯತೆ ಅಗತ್ಯವಿರುವ ಕೆಲಸ. ದಿನ ಪೂರ್ತಿ ಮರದ ಮೇಲೆ ನಿಂತು ಔಷಧ ಸಿಂಪಡಿಸಲು ವಿಶೇಷ ಪರಿಣತಿ, ಅಭ್ಯಾಸ ಬೇಕಾಗುತ್ತದೆ. ಈ ಕೆಲಸವನ್ನು ಚಂದ್ರಲೇಖ ಕಳೆದ ಮೂರು ವರುಷದಿಂದ ಮಾಡುತ್ತಾ ಬಂದಿದ್ದು ಸೈ ಎನಿಸಿಕೊಂಡಿದ್ದಾರೆ.
ಅಡಿಕೆಯೇ ಪ್ರಧಾನ ಆರ್ಥಿಕ ಮೂಲವಾಗಿರುವ ಸುಳ್ಯದಂತಹ ಭಾಗದಲ್ಲಿ ಅಡಿಕೆಗೆ ಔಷಧಿ ಸಿಂಪಡಿಸುವ ಮತ್ತು ಅಡಿಕೆ ಕೊಯ್ಯುವ ನುರಿತ ಕೆಲಸಗಾರರು ಸಿಗುವುದು ಬಲು ಕಷ್ಟ. ಇದ್ದಂತಹ ಬೆರಳೆಣಿಕೆಯ ಕೆಲಸಗಾರರಿಗಂತೂ ಬಲು ಬೇಡಿಕೆ. ಮೂರು ವರ್ಷಗಳ ಹಿಂದೆ ನಾಗಪಟ್ಟಣದಲ್ಲಿರುವ ಇವರ ಕುಟುಂಬದ ಅಡಿಕೆ ತೋಟಕ್ಕೆ ಮದ್ದು ಬಿಡಲು ಜನ ಸಿಗದೆ ಅಡಿಕೆಗೆ ಕೊಳೆ ರೋಗ ಬಂದು ಧರಾಶಾಯಿಯಾಗಿ ನಾಶವಾಗುವುದು ಕಂಡು ಚಂದ್ರಲೇಖ ಮತ್ತು ಕುಟುಂಬಸ್ಥರು ತುಂಬಾ ಮರುಗಿದ್ದರು. ಆ ಸಂದರ್ಭದಲ್ಲಿ ಇವರು ಮೆಷಿನ್ ಬಳಸಿ ಅಡಿಕೆ ಮರ ಏರಲು ಆರಂಭಿಸಿದರು. ಅಕ್ಕ ರತ್ನಾವತಿ ಮತ್ತು ಬಾವ ಆನಂದ ಗೌಡ ಇವರಿಗೆ ಪ್ರೋತ್ಸಾಹ ನೀಡಿದರು. ಅವರ ಬೆಂಬಲ ಮತ್ತು ಪ್ರೋತ್ಸಾಹದಲ್ಲಿ ಮರ ಏರುವ ವಿದ್ಯೆಯನ್ನು ಬಲು ಬೇಗ ಕರಗತ ಮಾಡಿಕೊಂಡ ಇವರು ತಮ್ಮ ತೋಟಕ್ಕೆ ಮೂರು ವರುಷಗಳಿಂದ ಪ್ರತಿ ವರ್ಷ ಎರಡು ಬಾರಿಯಂತೆ ಔಷಧ ಸಿಂಪಡಿಸುತ್ತಾರೆ. ಸುಳ್ಯ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಚಂದ್ರಲೇಖ ರಜಾ ದಿನಗಳಲ್ಲಿ ಔಷಧ ಸಿಂಪಡಿಸುವ ಕೆಲಸ ಮಾಡುತ್ತಾರೆ. ಇತರೆಡೆಗೆ ಇದುವರೆಗೆ ಔಷಧ ಸಿಂಪಡಿಸಲು ಹೋಗಿರಲಿಲ್ಲ. ಅನಿವಾರ್ಯವಾದರೆ ಎಲ್ಲಿಯೂ ಔಷಧ ಸಿಂಪಡೆಣೆಗೆ ಹೋಗಬಹುದು ಎನ್ನುವ ಧೈರ್ಯ, ಆತ್ಮವಿಶ್ವಾಸ ಇದೆ ಎನ್ನುತ್ತಾರವರು.
ಮಳೆಗಾಲದಲ್ಲಿ ಕನಿಷ್ಟ ಎರಡು ಬಾರಿಯಾದರೂ ಅಡಿಕೆ ತೋಟಕ್ಕೆ ಬೋರ್ಡೊ ಸಿಂಪಡಿಸಬೇಕು. ಇವರ ತೋಟದಲ್ಲಿ 600 ಅಡಿಕೆ ಮರಗಳಿದ್ದು ಅದಕ್ಕೆ ಔಷಧಿ ಸಿಂಪಡಿಸಲು ಚಂದ್ರಲೇಖರಿಗೆ ಎರಡು ದಿನ ಸಾಕು. ಪ್ರಥಮ ಬಾರಿ ಎರಡು ಬ್ಯಾರಲ್ ಮತ್ತು ಎರಡನೇ ಬಾರಿ ಮೂರು ಬ್ಯಾರಲ್ ಔಷಧಿ ಬೇಕಾಗುತ್ತದೆ. ಎರಡು ದಿನದಲ್ಲಿ ಪೂರ್ತಿ ತೋಟಕ್ಕೆ ಸಿಂಪಡಿಸಲು ಸಾಧ್ಯವಾಗುತ್ತದೆ. ಅಕ್ಕ ರತ್ನಾವತಿ, ಬಾವ ಆನಂದ ಗೌಡ ಇವರ ಮಕ್ಕಳಾದ ನವೀನ, ತ್ರಿವೇಣಿ ಔಷಧಿ ಸಿಂಪಡಿಸಲು ಚಂದ್ರಲೇಖರಿಗೆ ಸಾಥ್ ನೀಡುತ್ತಾರೆ. ಔಷಧ ತಯಾರಿಸಲು, ಪಂಪ್ಗೆ ಗಾಳಿ ತುಂಬಲು, ಪಂಪ್ನ ಕಂಟ್ರೋಲರ್ ಎತ್ತರಕ್ಕೆ ನೀಡಲು ಇವರು ಕೈ ಜೋಡಿಸುತ್ತಾರೆ. ಕಾಲ ಕಾಲಕ್ಕೆ ಔಷಧಿ ಸಿಂಪಡಿಸುವ ಕಾರಣ ಈಗ ತೋಟಕ್ಕೆ ಕೊಳೆ ರೋಗ ಬರುವುದಿಲ್ಲ ಮತ್ತು ಉತ್ತಮ ಫಸಲು ದೊರೆಯುತ್ತಿದೆ ಎಂದು ಚಂದ್ರಲೇಖ ಸಾಕ್ಷೀಕರಿಸುತ್ತಾರೆ.
ಮರವೇರಿ ಔಷಧಿ ಸಿಂಪಡಿಸುವ ಅನುಭವದ ಬಗ್ಗೆ ಕೇಳಿದರೆ ಅವರು ಅದನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಮೆಷಿನ್ ಬಳಸಿ ಅಡಿಕೆ ಮರದ ಮೇಲೆ ಏರಿದಾಗ ಯಾವುದೇ ರೀತಿಯ ಭಯ ಆಗುವುದಿಲ್ಲ, ಇಷ್ಟು ಎತ್ತರಕ್ಕೆ ಏರಿದೆನಲ್ಲ ಎಂಬ ಖಷಿ ಮತ್ತು ಹೆಮ್ಮೆ ಉಂಟಾಗುತ್ತದೆ ಎನ್ನುತ್ತಾರವರು. ಆರಂಭದಲ್ಲಿ ಅಡಿಕೆ ಮರ ಏರುವಾಗ ನಾಚಿಕೆ, ಮುಜುಗರ ಉಂಟಾದರೂ ಅದು ಕ್ರಮೇಣ ಮಾಯವಾಯಿತು. ನಿರಂತರ ಅಭ್ಯಾಸದಿಂದ ಮರ ಏರುವುದು, ಔಷಧಿ ಬಿಡುವುದು ಕರಗತವಾಯಿತು. ಮರ ಏರಿ ಅಡಿಕೆ ಕೊಯ್ಯುವ ಕೆಲಸ ಇದುವರೆಗೆ ಮಾಡಿಲ್ಲ. ಅಡಿಕೆ ಕೊಯ್ಯುವ ತಂತ್ರಗಾರಿಕೆ ಗೊತ್ತಿದೆ, ಅನಿವಾರ್ಯವಾದರೆ ಕೊಯ್ಯಬಹುದು ಜೊತೆಗೆ ಅಡಿಕೆ ಸುಲಿಯುವುದು ಸೇರಿದಂತೆ ಎಲ್ಲಾ ಕೆಲಸವೂ ಗೊತ್ತಿದೆ ಎನ್ನುತ್ತಾರವರು.
ವೈಯಕ್ತಿಕ ಬದುಕಿನಲ್ಲೂ ಚಂದ್ರಲೇಖ ಮಾದರಿಯಾಗಿದ್ದಾರೆ. ಚಂದ್ರಲೇಖ ಪತಿ ಸುಂದರ ಗೌಡ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಈಗ ಆತ್ಮವಿಶ್ವಾಸದ ಬದುಕು ಸಾಗಿಸುತ್ತಿದ್ದರೆ ಮಗಳು ಸುಶ್ಮಿತ ಪಿಯುಸಿ ವಿದ್ಯಾರ್ಥಿನಿ.