ಸರಕಾರಿ ಶಾಲೆ ಎಂದರೆ ಈಗ ಸಾಧನೆಯ ಮೆಟ್ಟಿಲುಗಳು. ಸರಕಾರ ಎಲ್ಲಾ ಸೌಲಭ್ಯ ನೀಡುತ್ತದೆ. ಆದರೆ ಬಳಸಿಕೊಳ್ಳುವುದರಲ್ಲಿ ಯಶಸ್ಸು ಇದೆ. ಅದಕ್ಕೆ ಉದಾಹರಣೆ ಚೆಂಬು ಸರಕಾರಿ ಪ್ರೌಢಶಾಲೆ.
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಚೆಂಬು ಗ್ರಾಮದಲ್ಲಿರುವ ಈ ಸರಕಾರಿ ಶಾಲೆಗೆ ಅನೇಕ ವರ್ಷಗಳ ಇತಿಹಾಸ ಇದೆ. ಸ್ಥಳಿಯವಾದ ಊರು ಬೈಲ್,ಬಾಲಂಬಿ, ಕುದುರೆಪಾಯ, ಕಾಂತಬೈಲು , ದಬ್ಬಡ್ಕದಿಂದ ಬರುವ ವಿದ್ಯಾರ್ಥಿಗಳು ಇಲ್ಲಿ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಕೂಲಿಕಾರ್ಮಿಕರು, ಮಧ್ಯಮವರ್ಗದ ಮಕ್ಕಳೇ ಇರುವ ಈ ಶಾಲೆ ಕಳೆದ ಐದು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ.ನೂರರಷ್ಟು ಫಲಿತಾಂಶ ಸಾಧನೆ ಮಾಡುವುದರ ಜೊತೆಗೆ ಇಲ್ಲಿಯ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ರಾಜ್ಯಮಟ್ಟದಲ್ಲಿ ಕೂಡಾ ಸ್ಪರ್ಧಿಸಿ ಗುರುತಿಸಿಕೊಳ್ಳುತ್ತಿದ್ದಾರೆ. ತಂದೆ ಕೂಲಿಕಾರ್ಮಿಕ,ತಾಯಿ ಬೀಡಿ ಕಟ್ಟಿ ದಿನದೂಡುತ್ತಿದ್ದರೂ,ಮಗಳು ಶೃದ್ಧಾ ಬಿ.ಆರ್ ಮಾತ್ರ ಬಡತನ ಸಾಧನೆಗೆ ಅಡ್ಡಿಯಲ್ಲವೆಂಬುದನ್ನು ಎಸ್ಸೆಸ್ಸೆಲ್ಸಿ ಯಲ್ಲಿ 596 ಅಂಕಗಳನ್ನು ಪಡೆದುಕೊಂಡು ಶಾಲೆಗೆ ಮೊದಲ ಸ್ಥಾನ ಗಳಿಸಿದ್ದರೆ ಅದೇ ಶಾಲೆಯ ಜೀವಿಕ ಬಿ.ಸಿ 581 ಅಂಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಯಲ್ಲಿ ಭಾಗವಹಿಸಿದ 22 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡು 14 ವಿದ್ಯಾರ್ಥಿಗಳು ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಈ ಶಾಲೆಯ ಹೆಮ್ಮೆ. ಇದು ಸಾಧನೆಯ ಕಿರೀಟ.
ಹಾಗಂತ ಈ ಶಾಲೆಯಲ್ಲಿ ಎಲ್ಲಾ ಸರಕಾರಿ ಶಾಲೆಗಳಂತೆಯೇ ಸಮಸ್ಯೆಗಳು ಇವೆ. ಸರಿಯಾದ ರಸ್ತೆ ಇಲ್ಲ, ಸೇತುವೆ ಇಲ್ಲ, ಮೂಲಭೂತ ವ್ಯವಸ್ಥೆಗಳು ಇಲ್ಲ. ಅದೆಲ್ಲವನ್ನೂ ಮೀರಿ ಈ ಶಾಲೆಯ ಶಿಕ್ಷಕರು ಪ್ರಯತ್ನ ಮಾಡಿದ್ದಾರೆ, ಯಶಸ್ಸು ಕಂಡಿದ್ದಾರೆ. ಹೀಗಾಗಿ ಚೆಂಬು ಸರಕಾರಿ ಶಾಲೆ ರಾಜ್ಯಕ್ಕೆ ಮಾದರಿ.