ಕೆಲವೇ ದಿನದಲ್ಲಿ ಇಡೀ ದೇಶಕ್ಕೆ ಪರಿಚಯವಾದ ಇವರು ಒಡಿಶಾದ ಪ್ರತಾಪ್ ಚಂದ್ರ ಸಾರಂಗಿ. ಇದೀಗ ದೇಶದ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಆಸ್ತಿ ಸುಮಾರು 13 ಲಕ್ಷ , ಸೈಕಲ್ ಮಾತ್ರವೇ ಅವರ ವಾಹನ. ಗುಡಿಸಲೇ ಅವರ ಮನೆ. ಇಂತಹವರೊಬ್ಬರು ಸಚಿವರಾಗುವುದು ಎಂದರೆ ಪ್ರಜಾಪ್ರಭುತ್ವದ ಗೆಲುವು ಎಂದು ವಿಶ್ಲೇಷಣೆ ಮಾಡಲಾಗುತ್ತದೆ.
ಒಡಿಶಾದ ಬಾಲಸೋರ್ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ತನ್ನ ಸರಳ ಜೀವನ ಶೈಲಿಯಿಂದಲೇ ಮನೆಮಾತಾದ ಪ್ರತಾಪ್ ಚಂದ್ರ ಸಾರಂಗಿ ಮೋದಿ ಸಚಿವ ಸಂಪುಟದಲ್ಲಿ ಸಹಾಯಕ ಸಚಿವರಾಗಿ ಈಗ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗುಡಿಸಿಲಿನಲ್ಲಿ ವಾಸ ಮಾಡುತ್ತಾ, ಸೈಕಲ್ ಮೇಲೆ ಏರಿ ಚುನಾವಣೆ ಪ್ರಚಾರ ಮಾಡಿದ್ದರು. ಒಡಿಶಾದ ಬಾಲಾಸೋರ್ನಿಂದ ಸ್ಪರ್ಧಿಸಿದ್ದ ಸಾರಂಗಿ ಅವರು ತಮ್ಮ ಎದುರಾಳಿಯನ್ನು 12,956 ಮತಗಳ ಅಂತರದಿಂದ ಸೋಲಿಸಿದ್ದರು. ಸಾರಂಗಿ ಅವರು ಚುನಾವಣೆ ಗೆದ್ದಾಗಲೇ ಭಾರಿ ಜನಪ್ರಿಯತೆಗೆ ಪಾತ್ರರಾಗಿದ್ದರು. 64 ವರ್ಷದ ಇವರು ಒಡಿಶಾದ ‘ನರೇಂದ್ರ ಮೋದಿ’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರಿಗೆ ದೊಡ್ಡ ಮೊತ್ತದ ಆಸ್ತಿಯಿಲ್ಲ. ಬೃಹತ್ ಬಂಗಲೆಯಿಲ್ಲ. ನಿತ್ಯ ಸೈಕಲ್ನಲ್ಲಿಯೇ ಸಂಚಾರ. ಗುಡಿಸಲಿನಲ್ಲಿ ವಾಸ. ಅವಿವಾಹಿತ. 2004, 2009ರಲ್ಲಿ ನೀಲಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರೂ ತಮಗಾಗಿ ಸ್ವಂತ ಸೂರನ್ನು ಕೂಡ ನಿರ್ಮಿಸಿಕೊಳ್ಳಲಿಲ್ಲ. ಗುಡಿಸಲಿನಲ್ಲಿ ವಾಸಮಾಡಿಕೊಂಡು, ಸೈಕಲ್ನಲ್ಲಿ ಸಂಚರಿಸುವ ಪ್ರತಾಪ್ ಸರಳತೆಗೆ ಜನಪ್ರಿಯರು. 2014ರಲ್ಲಿ ಬಿಜೆಪಿಯಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರಾದರೂ, 1.42 ಲಕ್ಷ ಮತಗಳಿಂದ ಜೇನಾ ವಿರುದ್ಧ ಸೋತಿದ್ದರು. ಈಗ ಮೊದಲ ಬಾರಿಗೆ ಸಂಸತ್ಗೆ ಆಯ್ಕೆ ಆಗಿರುವ ಪ್ರತಾಪ್ ಚಂದ್ರ ಸಾರಂಗಿ ಅವರಿಗೆ ಎರಡು ರಾಜ್ಯ ಖಾತೆಗಳು ದೊರೆತಿವೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವ ಹಾಗೂ ಪಶುಸಂಗೋಪನೆ ಮತ್ತು ಹೈನುಗಾರಿಗೆ ಮತ್ತು ಮೀನುಗಾರಿಕೆ ಖಾತೆ ರಾಜ್ಯ ಸಚಿವರಾಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ.
ಬಾಲಸೋರ್ ಜಿಲ್ಲೆಯ ಗೋಪಿನಾಥಪುರ್ನ ಬಡಕುಟುಂಬದಲ್ಲಿ ಜನಿಸಿದ್ದ ಪ್ರತಾಪ್ ಸಿಂಗ್ ಸಾರಂಗಿ, ಅಲ್ಲಿನ ಫಕೀರ್ ಮೋಹನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಒಡಿಯಾ ಮತ್ತು ಸಂಸ್ಕೃತದಲ್ಲಿ ಸರಾಗವಾಗಿ ಮಾತನಾಡಬಲ್ಲ ಇವರು ದ್ವಿಭಾಷಾ ನಿಪುಣ ಬಾಲ್ಯದಿಂದಲೂ ಆಧ್ಯಾತ್ಮದತ್ತ ಒಲವು. ಒಮ್ಮೆ ಸನ್ಯಾಸಿಯಾಗಲು ಬಯಸಿ ರಾಮಕೃಷ್ಣಮಠಕ್ಕೆ ತೆರಳಿದ್ದರು. ಇವರಿಗೆ ತಂದೆ ಇಲ್ಲ, ತಾಯಿ ಒಬ್ಬರೇ ಇದ್ದಾರೆ ಎಂಬುದನ್ನು ತಿಳಿದ ರಾಮಕೃಷ್ಣಮಠದವರು ಹೋಗಿ ತಾಯಿಯ ಕಾಳಜಿ ವಹಿಸಲು ಸಲಹೆ ಮಾಡಿದ್ದರು. ಆ ನಂತರ ಸಾರಂಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ತಾಯಿ ಜೀವಂತವಿದ್ದ ಕಾರಣ ಅವರ ನಿರ್ವಹಣೆ ಕರ್ತವ್ಯಕ್ಕೆ ಬದ್ಧರಾಗಿ ಸನ್ಯಾಸತ್ವ ಸ್ವೀಕರಿಸದೆ ಸಂತನಂತೆ ಬದುಕಿದವರು . ಜೊತೆಗೆ ವಾಸವಿದ್ದ ತಾಯಿ ಕಳೆದ ವರ್ಷವಷ್ಟೇ ನಿಧನರಾದರು.
ಆರ್ಎಸ್ಎಸ್ ಸಂಪರ್ಕ :
ಪ್ರಖರ ವಾಗ್ಮಿ, ಸಂಸ್ಕೃತ ಪಂಡಿತ ಹಾಗೂ ಆರ್ಎಸ್ಎಸ್ ಕಾರ್ಯಕರ್ತ ಸಾರಂಗಿ ಸೈಕಲ್ ನಲ್ಲೇ ಹಳ್ಳಿಗಳಿಗೆ ಸುತ್ತುವ ಸರಳ ಜೀವಿ. ಆರ್ಎಸ್ಎಸ್, ವಿಎಚ್ಪಿ ಸಂಪರ್ಕಕ್ಕೆ ಬಂದ ಬಳಿಕ ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ‘ಗಣ ಶಿಕ್ಷಣ ಮಂದಿರ’ ಯೋಜನೆಯಡಿ ಬಾಲಸೋರ್, ಮಯೂರ್ಭಂಜ್ ಜಿಲ್ಲೆಯಲ್ಲಿ ಬುಡಕಟ್ಟು ಜನರಿಗೆ ಸಮರ್ ಕರ ಕೇಂದ್ರ ಹೆಸರಿನಲ್ಲಿ ಶಾಲೆಗಳನ್ನು ತೆರೆದಿದ್ದಾರೆ.ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಮದ್ಯಮಾರಾಟ, ಭ್ರಷ್ಟಾಚಾರ, ಅನ್ಯಾಯ, ಪೊಲೀಸ್ ದೌರ್ಜನ್ಯ ಪ್ರಕರಣ ವಿರುದ್ಧದ ಹಲವು ಹೋರಾಟಗಳ ನೇತೃತ್ವ ವಹಿಸಿದ್ದಾರೆ.