ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿಯಲ್ಲಿ ನಿಯೋಜಿತರಾಗಿರುವ ಸೈನಿಕರೊಂದಿಗೆ ಮಾತುಕತೆ ನಡೆಸಲು ಭಾರತದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಸೋಮವಾರ ತೆರಳಿದರು. ಇದು ಯಾಕೆ ಮಹತ್ವ ಪಡೆಯಿತು ಎಂದರೆ ಅಧಿಕಾರಿ ಸ್ವೀಕರಿಸಿದ 24 ಗಂಟೆಯೊಳಗೆ ಸಿಯಾಚಿನ್ ಗೆ ಭೇಟಿ ನೀಡಿರುವುದು ಗಮನಸೆಳೆಯಿತು.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೂಡ ರಾಜ್ ನಾಥ್ ಸಿಂಗ್ ಜೊತೆಯಲ್ಲಿ ಇದ್ದರು. ರಕ್ಷಣಾ ಸಚಿವಾಲಯದ ಕಾರ್ಯ ನಿರ್ವಹಣೆ ಬಗ್ಗೆ ಹಿರಿಯ ಅಧಿಕಾರಿಗಳು ರಾಜ್ ನಾಥ್ ಸಿಂಗ್ ಅವರಿಗೆ ಸಿಯಾಚಿನ್ ಬೇಸ್ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿದ್ದರು. ಹಿಂದಿನ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್, ಮನೋಹರ್ ಪರಿಕರ್ ಕೂಡ ಸಿಯಾಚಿನ್ ಗೆ ಭೇಟಿ ನೀಡಿದ್ದರು. ಐದು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಬೇಸ್ ಕ್ಯಾಂಪ್ ನಲ್ಲಿ ಸೈನಿಕರ ಜತೆಗೆ ದೀಪಾವಳಿ ಆಚರಿಸಿದ್ದರು. ಜಾರ್ಜ್ ಫರ್ನಾಂಡಿಸ್ ಅವರು ರಕ್ಷಣಾ ಸಚಿವರಾಗಿದ್ದಾಗ ಮೂವತ್ತಕ್ಕೂ ಹೆಚ್ಚು ಬಾರಿ ಸಿಯಾಚಿನ್ ಗೆ ಭೇಟಿ ನೀಡಿದ್ದರು.
ಇದೇ ಸಂದರ್ಭ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ರಾಜನಾಥ್ ಸಿಂಗ್, “ಮುಂಚೂಣಿ ಸೇನಾ ಠಾಣೆಗೆ ಹಾಗೂ ಸಿಯಾಚಿನ್ ನ ಬೇಸ್ ಕ್ಯಾಂಪ್ ಗೆ ಭೇಟಿ ನೀಡಿದ್ದೆ. ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ’ಯಲ್ಲಿ ಕಾರ್ಯ ನಿರ್ವಹಿಸುವ ಸೇನಾ ಸಿಬ್ಬಂದಿ ಜತೆಗೆ ಮಾತುಕತೆ ನಡೆಸಿದೆ. ಸಿಯಾಚಿನ್ ನಲ್ಲಿ ಕಾರ್ಯ ನಿರ್ವಹಿಸುವಾಗ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದೇನೆ” ಎಂದಿದ್ದಾರೆ.