ಜನಪ್ರತಿನಿಧಿಗಳು ಎಂದರೆ ಹಲವು ಬಾರಿ ಮನವಿ ಮಾಡಬೇಕು, ಹಲವು ಬಾರಿ ಭೇಟಿಯಾಗಬೇಕು ಎಂಬ ಮಾತುಗಳು ಸರ್ವೇ ಸಾಮಾನ್ಯ. ಆದರೆ ಈ ಸುದ್ದಿ ಏಕೆ ಹೆಚ್ಚು ಮಹತ್ವ ಪಡೆಯಿತು, ಏಕೆ ಧನಾತ್ಮಕ ಸುದ್ದಿಯಾಯಿತು ಎಂದರೆ ಅನೇಕ ವರ್ಷಗಳ ಸಮಸ್ಯೆಗೆ ಎರಡನೇ ದಿನದಲ್ಲಿ ಪರಿಹಾರ ಸಿಕ್ಕಿತು. ಅದು ಶಾಸಕ ವೇದವ್ಯಾಸ ಕಾಮತ್ ಅವರ ಕಾರಣದಿಂದ.
ಮಂಗಳೂರು ನಗರ ದಕ್ಷಿಣದಲ್ಲಿ ಇರುವ ಜೆಪ್ಪಿನಮೊಗರು ಪ್ರದೇಶದ ಸ್ಮಶಾನಗುಡ್ಡೆ ಪರಿಸರದಲ್ಲಿ ವಾಸಿಸುವ ನಾಗರಿಕರು ಅನೇಕ ವರ್ಷದಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದ್ದರೂ ಗುಡ್ಡ ಪ್ರದೇಶವಾಗಿರುವುದರಿಂದ ತುಂಬೆಯಿಂದ ಪೈಪಿನ ಮೂಲಕ ಬರುವ ನೀರು ಈ ಭಾಗದಲ್ಲಿ ಎತ್ತರದ ಪ್ರದೇಶದ ಕಾರಣದಿಂದ ತಲುಪುತ್ತಿರಲಿಲ್ಲ.
ಈ ಭಾಗದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಕಾಣದೇ ಅಲ್ಲಿನ ನಾಗರಿಕರು ಶಾಸಕ ಡಿ ವೇದವ್ಯಾಸ ಕಾಮತ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡರು. ಅಷ್ಟೇ ಅಲ್ಲ ಪರಿಹಾರವನ್ನೂ ಅವರೇ ಹೇಳಿದರು, ಅಲ್ಲಿಗೆ ಕೊಳವೆಬಾವಿ ತೋಡಿ ಕುಡಿಯುವ ನೀರಿನ ಸಂಕಷ್ಟವನ್ನು ಬಗೆಹರಿಸಲು ಕೋರಿದರು. ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಶಾಸಕ ಕಾಮತ್ ಜಪ್ಪಿನಮೊಗರು ಸ್ಮಶಾನಗುಡ್ಡೆ ಯಲ್ಲಿ ಶೀಘ್ರದಲ್ಲಿ ಕೊಳವೆಬಾವಿ ತೋಡುವಂತೆ ಸೂಚನೆ ನೀಡಿದರು.
ಶಾಸಕರ ಸೂಚನೆಯಂತೆ ಎರಡು ದಿನಗಳೊಳಗೆ ಅಲ್ಲಿ ಕೊಳವೆಬಾವಿ ತೋಡಲಾಗಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಶಾಸಕ ವೇದವ್ಯಾಸ ಕಾಮತ್ ಈ ಕಾರಣದಿಂದ ಗಮನಸೆಳೆದಿದ್ದಾರೆ. ಎಲ್ಲಾ ಜನಪ್ರತಿನಿಧಿಗಳೂ ಈ ಮಾದರಿಯಲ್ಲಿರಲಿ ಎಂಬುದು ಆಶಯ.