ಸುಳ್ಯ: ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡುವುದನ್ನು ವಿರೋಧಿಸಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಸುಳ್ಯ ತಾಲೂಕಿನ ಕಸ್ತೂರಿ ರಂಗನ್ ಬಾದಿತ ಗ್ರಾಮಗಳ ಜನರ ವಿರೋಧವನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರಜಾಪ್ರಭುತ್ವ ನೆಲೆಯಲ್ಲಿ ಹೋರಾಟ:– ಕಿಶೋರ್ ಶಿರಾಡಿ

ಕಸ್ತೂರಿ ರಂಗನ್ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನ ನಡೆದರೂ ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ಮಾಡಿಯೇ ಸಿದ್ಧ ಎಂದು ಪ್ರತಿಭಟನೆಯಲ್ಲಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಹೇಳಿದ್ದಾರೆ. ನಮ್ಮ ಸಿದ್ಧಾಂತಕ್ಕೆ ವಿರುದ್ಧ ವಾಗಿ, ರೈತರಿಗೆ ಮಾರಕವಾಗುವ ರೀತಿಯಲ್ಕಿ ಯಾವ ಸರಕಾರ ನಡೆದುಕೊಂಡರೂ ಅದರ ವಿರುದ್ಧ ಹೋರಾಟ ಮಾಡುತ್ತೇವೆ. ಕಸ್ತೂರಿ ರಂಗನ್ ವರದಿಯಿಂದ ಯಾವೊಬ್ಬ ರೈತನಿಗೂ ತೊಂದರೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.
ನೈಜ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ- ಲಕ್ಷೀಶ ಗಬ್ಲಡ್ಕ

ಜನರ ಬದುಕಿಗೆ ಮಾರಕವಾಗುವ ಸಂಗತಿಗಳ ಬಗ್ಗೆ ಜನರು ಅರಿತು ಕೊಳ್ಳುವುದಿಲ್ಲ. ವಿಚಾರಗಳಿಗೆ ತಾತ್ಕಾಲಿಕವಾದ ಮತ್ತು ಭಾವನಾತ್ಮಕವಾದ ಸ್ಪರ್ಶ ನೀಡಿ ನೈಜ ಸಮಸ್ಯೆಗಳಿಂದ ಜನರನ್ನು ದೂರ ತಳ್ಳುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ಮಾತನಾಡಿದ ಲಕ್ಷ್ಮೀಶ ಗಬ್ಲಡ್ಕ ಹೇಳಿದರು. ಕಸ್ತೂರಿ ರಂಗನ್ ವರದಿಯಂತಹಾ ಗಂಭೀರ ವಿಚಾರಗಳ ಬಗ್ಗೆ ಅರಿತು ಕೊಳ್ಳದೆ, ಯಾರೊಬ್ಬರೂ ಧ್ವನಿ ಎತ್ತದ ಸಂದರ್ಭದಲ್ಲಿ ಈ ರೀತಿಯ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಪ್ರಧಾನಿಗೆ ಮನವರಿಕೆ ಮಾಡಲಿ- ಎಂ.ವಿ.ಜಿ:

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ ‘ಯಾವುದೇ ರಾಜಕೀಯ ಪಕ್ಷಗಳು ರೈತರ ಬಗ್ಗೆಗಿನ ಕಾಳಜಿಯಲ್ಲಿ ಆಡಳಿತದಲ್ಲಿರುವಾಗ ಒಂದು ನೀತಿ, ವಿರೋಧದಲ್ಲಿರುವಾಗ ಇನ್ನೊಂದು ನೀತಿ ಅನುಸರಿಸಬಾರದು ಎಂದು ಹೇಳಿದರು. ರೈತರ ಮತ ಪಡೆದು ಅಧಿಕಾರಕ್ಕೆ ಬಂದು ರೈತ ವಿರೋಧಿ ನೀತಿ ಅನುಸರಿಸಿದರೆ ರೈತರ ಶಾಪ ತಟ್ಟದೇ ಇರುವುದಿಲ್ಲ ಎಂದ ಅವರು ಕಸ್ತೂರಿ ರಂಗನ್ ವರದಿಯಿಂದ ಜನರ ಆತಂಕದ ಬಗ್ಗೆ ಪ್ರಧಾನಿಗೆ ಮನ ವರಿಕೆ ಮಾಡುವ ಕೆಲಸವನ್ನು ಶಾಸಕರು, ಸಂಸದರು, ಮುಖ್ಯಮಂತ್ರಿಗಳು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕಾನೂನುಗಳು ಜನಪರವಾಗಿರಬೇಕು: ಪ್ರಸನ್ನ ಎಣ್ಮೂರು

ಸರಕಾರಗಳು ರೂಪಿಸುವ ಕಾನೂನುಗಳು, ವರದಿಗಳು ಜನಪರವಾಗಿರಬೇಕೇ ಹೊರತು ಜನರನ್ನು ಆತಂಕಕ್ಕೆ ತಳ್ಳುವಂತಿರಬಾರದು ಎಂದು ಸಹಕಾರ ಭಾರತಿಯ ಪ್ರಮುಖರಾದ ಪ್ರಸನ್ನ ಎಣ್ಮೂರು ಹೇಳಿದರು. ಕಸ್ತೂರಿ ರಂಗನ್ ವರದಿಯ ಸಾಧಕ ಬಾದಕಗಳ ಬಗ್ಗೆ ಚರ್ಚೆ ನಡೆದು ಶಾಶ್ವತ ಪರಿಹಾರ ಆಗಬೇಕು. ಇಂತಹಾ ಜ್ವಲಂತ ಸಮಸ್ಯೆಯ ಬಗ್ಗೆ ಹಮ್ಮಿಕೊಂಡ ಪ್ರತಿಭಟನೆಗೆ ಜನ ಸೇರದಂತೆ ಭಯ ಹುಟ್ಟಿಸುವ ಕೆಲಸ ನಡೆದಿದೆ ಎಂದರು. ಸುಳ್ಯದ ರೈತರು ಅಡಿಕೆ ಹಳದಿ ರೋಗದ ಪರಿಹಾರಕ್ಕೆ ಪ್ರಯತ್ನ ನಡಸುವ ಬಗ್ಗೆ ಮಾತನಾಡುತ್ತಾರೆ. ಆದರೆ ರೈತರ ಭೂಮಿ ಉಳಿಯುತ್ತದೆಯೇ ಎಂಬ ಆತಂಕ ಈಗ ನಮ್ಮ ಎದುರಿಗಿದೆ ಎಂದರು.
ಕಸ್ತೂರಿರಂಗನ್ ವರದಿಯ ಬಗ್ಗೆ ರಾಜಕೀಯ ಬೇಡ- ಜೆ.ಪಿ.ರೈ

ಕಸ್ತೂರಿ ರಂಗನ್ ವರದಿ ಈಗಿನ ರೀತಿಯಲ್ಲಿ ಅನುಷ್ಠಾನ ಆದರೆ ಎಲ್ಲರಿಗೂ ಸಮಸ್ಯೆ ಉಂಟಾಗಲಿದೆ. ಆದುದರಿಂದ ಕಸ್ತೂರಿರಂಗನ್ ವಿಚಾರದಲ್ಲಿ ರಾಜಕೀಯ ಬದಿಗಿರಿಸಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದರು. ಕಸ್ತೂರಿರಂಗನ್ ವರದಿಯ ಸಾಧಕ ಬಾದಕಗಳ ಬಗ್ಗೆ ಸಮಗ್ರ ಚರ್ಚೆ ನಡೆದು ವರದಿ ಪುನರ್ ಪರಿಶೀಲನೆ ಆಗಲಿ ಎಂದು ಅವರು ಒತ್ತಾಯಿಸಿದರು.

ಶೈಲೇಶ್ ಅಂಬೆಕಲ್ಲು ಮಾತನಾಡಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಜಯರಾಮ ಕಟ್ಟೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬನ್ನೂರುಪಟ್ಟೆ ಪ್ರದೀಪ್ ಕರಿಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಟಿ.ಎನ್.ಸತೀಶ್ ಕಲ್ಮಕ್ಕಾರು ವಂದಿಸಿದರು.

ಮಲೆನಾಡು ಜನಹಿತರಕ್ಷಣಾ ವೇದಿಕೆಯ ತಾಲೂಕು ಸಂಚಾಲಕ ಭಾನುಪ್ರಕಾಶ್ ಪೆರುಮುಂಡ, ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ರುದ್ರಪಾದ, ಸಂಪತ್ ಮುತ್ಲಾಜೆ ಪ್ರಮುಖರಾದ ಉಮೇಶ್ ಕಜ್ಜೋಡಿ, ರತ್ನಾಕರ ಬಳ್ಳಡ್ಕ, ದಿವಾಕರ ಪೈ, ಭರತ್ ಕುಮಾರ್, ಮಂಜುನಾಥ್ ಮಡ್ತಿಲ, ಭರತ್ ಕನ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.
ಶಾಮಿಯಾನಕ್ಕಿಲ್ಲ ಅವಕಾಶ:
ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ನಡೆದ ಪ್ರತಿಭಟನೆಗೆ ತಾಲೂಕು ಕಚೇರಿ ಎದುರಿನಲ್ಲಿ ಶಾಮಿಯಾನ ಹಾಕಲು ಅವಕಾಶ ನೀಡಲಿಲ್ಲ. ವೇದಿಕೆಯ ಕಾರ್ಯಕರ್ತರು ಶಾಮಿಯಾನ ಹಾಕಲು ಮುಂದಾದಾಗ ಅವಕಾಶ ನಿರಾಕರಿಸಲಾಯಿತು. ಬಳಿಕ ಮರದ ನೆರಳಿನಲ್ಲಿ ಕುರ್ಚಿ ಹಾಕಿ ಕುಳಿತು ಪ್ರತಿಭಟನೆ ನಡೆಸಿದರು.