ಸುಳ್ಯ: ಸ್ವಚ್ಛತೆಯ ಸಂದೇಶ ಸಾರಿ ವಿಶ್ವ ಶೌಚಾಲಯ ದಿನಾಚರಣೆ ಸುಳ್ಯ ತಾಲೂಕಿನ ಮಂಡೆಕೋಲು ಸಹಕಾರಿ ಸಂಘದ ಅಮೃತ ಸಹಕಾರ ಸಭಾಭವನದಲ್ಲಿ ಗುರುವಾರ ನಡೆಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ.ಜಿ.ಪಂ., ತಾ.ಪಂ.ಸುಳ್ಯ, ಮಂಡೆಕೋಲು ಗ್ರಾ.ಪಂ. ಸಹಭಾಗಿತ್ವದಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನಡೆದ ವಿಶ್ವ ಶೌಚಾಲಯ ದಿನಾಚರಣೆ – 2020ಯನ್ನು ಜಿಲ್ಲಾ ಪಂಚಾಯಿತಿ ಆಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು. ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಅಂಗನವಾಡಿ ಕೇಂದ್ರ, ಶಾಲೆ ಮತ್ತು ವಸತಿ ಶಾಲೆಗಳಿಗೆ ಕೊಳವೆ ನೀರು ಸಂಪರ್ಕ ಕಲ್ಪಿಸುವ 100 ದಿನಗಳ ವಿಶೇಷ ಆಂದೋಲನಕ್ಕೆ ಅವರು ಚಾಲನೆ ನೀಡಿದರು.
ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ. ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಮಂಡೆಕೋಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ಮೋಹಿನಿ ಚಂದ್ರಶೇಖರ, ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು, ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ್, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತಕೃಷ್ಣ ಚಾಕೋಟೆ, ಗ್ರಾ.ಪಂ. ಪಿ.ಡಿ.ಒ. ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಆಡಳಿತಾಧಿಕಾರಿ ಲಕ್ಷ್ಮೀಶ್ ರೈ ರೆಂಜಾಳ ಸ್ವಾಗತಿಸಿದರು. ಸುರೇಶ್ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.
ನೈರ್ಮಲ್ಯ ಜಾಥಾ:
ಕಾರ್ಯಕ್ರಮದ ಅಂಗವಾಗಿ ನೈರ್ಮಲ್ಯ ಜಾಥಾ, ಜಲಜೀವನ್ ಮಿಷನ್ನ ಮನೆ ಮನೆಗೆ ಗಂಗೆ ಕೊಳವೆ ಸಂಪರ್ಕ ಯೋಜನೆ, ಏಕರೂಪದ ವಿನ್ಯಾಸದ ಸ್ವಚ್ಛ ವಾಹಿನಿಗೆ ಚಾಲನೆ ನೀಡಲಾಯಿತು. ಅವಳಿ ಗುಂಡಿ ಶೌಚಾಲಯದ ವೀಡಿಯೋ ಪ್ರದರ್ಶನ, ಪ್ಲಾಸ್ಟಿಕ್ ಮುಕ್ತ ಪಂಚಾಯಿತಿ ಆಗಿ ರುಪಿಸಲು ಬಟ್ಟೆ ಚೀಲ ವಿತರಣೆ, ಒಣ ಕಸ ಸಂಗ್ರಹಣೆಗೆ ಬೋರೋ ಬ್ಯಾಗ್ ವಿತರಣೆ ನಡೆಯಿತು. ವೈಯುಕ್ತಿಕ ಶೌಚಾಲಯ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಯಿತು.