ಅಡಿಕೆ ಮಾರುಕಟ್ಟೆ ಏರಿಕೆಯಲ್ಲಿಯೇ ಸಾಗುತ್ತಿದೆ. 300 ರೂಪಾಯಿ ಆಗುತ್ತದೆ, 400 ರೂಪಾಯಿ ಆಗುತ್ತದೆ ಎಂಬ ನಿರೀಕ್ಷೆ ಕಳೆದು ಈಗ 500 ರೂಪಾಯಿ ಆಗುತ್ತದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಹಾಗಿದ್ದರೆ ಇದು ನಿಜವಾದೀತೇ ? ನಿಜವಾಗಬೇಕಾ ಎಂಬ ಚರ್ಚೆಗೆ ಹೆಚ್ಚು ಬೆಲೆ ಬರುತ್ತಿದೆ. ಕಾರಣ, ಇಷ್ಟೇ, ಅಡಿಕೆ ರೇಟು ಹೀಗೂ ಏರಿದರೆ ಏನಾಗಬಹುದು ?
ಸದ್ಯದ ಮಟ್ಟಿಗೆ ಹಳೆ ಅಡಿಕೆ ಧಾರಣೆ 415-425 ರೂಪಾಯಿ ಹಾಗೂ ಹೊಸ ಅಡಿಕೆ ಧಾರಣೆ 360-370 ರೂಪಾಯಿವರೆಗೆ ಇದೆ. ಇನ್ನೂ ಅಡಿಕೆ ಧಾರಣೆ ಏರಿಕೆ ಕಾಣುತ್ತದೆ ಎಂಬ ನಿರೀಕ್ಷೆ ಇದೆ. ದೇಶದೊಳಗೆ ಅಡಿಕೆ ಆಮದು ಆಗುವುದು ಸಂಪೂರ್ಣ ಹಿಡಿತದಲ್ಲಿರುವುದು ಹಾಗೂ ಅಡಿಕೆ ಜಗಿಯುವವರ ಸಂಖ್ಯೆ ಹೆಚ್ಚಾಗಿರುವುದು ಅಡಿಕೆಗೆ ಈಗ ಏರಿಕೆ ಕಾಣುವುದಕ್ಕೆ ಪ್ರಮುಖವಾದ ಕಾರಣ. ಆದರೆ ವಿಪರೀತ ಏರಿಕೆಯಾದರೆ ಖರೀದಿ ಮಾಡುವವರ ಸಂಖ್ಯೆಯೂ ಕಡಿಮೆಯಾಗುವುದೂ ಮಾರುಕಟ್ಟೆಯಲ್ಲಿನ ಲೆಕ್ಕಾಚಾರಗಳು. ಆದರೆ ಈ ಬಾರಿ ಸಹಜವಾಗಿಯೇ ಫಸಲು ತೀರಾ ಕಡಿಮೆ ಇರುವುದು ಅಡಿಕೆ ಮಾರುಕಟ್ಟೆ ಇದೇ ರೀತಿ ಉಳಿಸಿಕೊಳ್ಳಲು ಪ್ಲಸ್ ಪಾಯಿಂಟ್ ಆದರೆ ಹಳೆ ಅಡಿಕೆಯನ್ನು ಈ ಹಿಂದೆ 400 ರೂಪಾಯಿ ಆದಾಗ ಬಹುಪಾಲು ಬೆಳೆಗಾರರು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದೂ ಕೂಡಾ ಈಗ ಧಾರಣೆ ಏರಿಕೆಗೆ ಅನುಕೂಲವಾದ ವಾತಾವರಣ ಸೃಷ್ಟಿ ಮಾಡಿದೆ. ಉತ್ತರ ಭಾರತದಲ್ಲಿ ಅಡಿಕೆ ದಾಸ್ತಾನು ಇರಿಸಿಕೊಂಡವರಲ್ಲೂ ಈಗ ಅಡಿಕೆ ಕೊರತೆ ಉಂಟಾಗುತ್ತಿದೆ. ಅಡಿಕೆ ವ್ಯಾಪಾರ ಎಂದರೆ ವರ್ಷಪೂರ್ತಿ ನಡೆಯಬೇಕು. ಅಡಿಕೆ ವ್ಯಾಪಾರಿಗಳಿಗೆ ವರ್ಷಪೂರ್ತಿ ವ್ಯಾಪಾರ ನಡೆಯಲೇಬೇಕು. ಬೆಳೆಗಾರರಿಗೆ ಆದರೆ ಹಾಗಿಲ್ಲ. ಅಡಿಕೆಯನ್ನು ಅವಶ್ಯಕತೆಗೆ ತಕ್ಕಂತೆ ಮಾರುಕಟ್ಟೆಗೆ ಬಿಡುವ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಇದೇ ತಂತ್ರವನ್ನು ಮುಂದೆಯೂ ಮುಂದುವರಿಸಿದರೆ ಈ ವರ್ಷ ಪೂರ್ತಿ ಉತ್ತಮ ಧಾರಣೆ ಅಡಿಕೆ ಬೆಳೆಗಾರರಿಗೆ ಪಡೆದುಕೊಳ್ಳಲು ಸಾಧ್ಯವಿದೆ.