ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಈಗೀಗ ವಿವಾದಗಳ ಕೇಂದ್ರವಾಗುತ್ತಿದೆ. ಇದೀಗ ಕುಮಾರಧಾರಾ ಬಳಿ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ಮಾಡುವ ವಾಹನ ಪಾರ್ಕಿಂಗ್ ಗೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ಹೆಸರಿನಲ್ಲಿ ಶುಲ್ಕ ಪಡೆಯಲಾಗುತ್ತದೆ ಎನ್ನುವುದು ಈಗಿನ ವಿವಾದ.ಈ ಬಗ್ಗೆ ಎರಡು ದಿನಗಳಿಂದ
ಸುಬ್ರಹ್ಮಣ್ಯದ ಕೆಲವು ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ. ಕುಮಾರಧಾರಾ ಬಳಿ ವಾಹನ ನಿಲುಗಡೆಗೆ ಹೆಚ್ಚಿನ ಜಾಗವಿಲ್ಲ. ಹೀಗಾಗಿ ಇಲ್ಲಿ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತದೆ. ಹೀಗೆ ಪಾರ್ಕಿಂಗ್ ಮಾಡುವ ವಾಹನಗಳಿಗೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ಹೆಸರಿನಲ್ಲಿ ಶುಲ್ಕ ಪಡೆಯಲಾಗುತ್ತದೆ ಎನ್ನುವುದು ವಿವಾದದ ಕೇಂದ್ರ. ಈ ಹಿಂದೆ ಇದೇ ಜಾಗದಲ್ಲಿ ದೇವಸ್ಥಾನವು ಕಟ್ಟಡ ನಿರ್ಮಾಣ ಮಾಡಲು ಹೊರಟಾಗ ಲೋಕೋಪಯೋಗಿ ಇಲಾಖೆಯ ಜಾಗವೆಂದು ಕಟ್ಟಡ ಕಾಮಗಾರಿ ಉದ್ದೇಶ ಕೈಬಿಡಲಾಗಿತ್ತು. ಇದೀಗ ಇದೇ ಜಾಗದಲ್ಲಿ ಖಾಸಗಿ ಮಠ ವಾಹನ ಪಾರ್ಕಿಂಗ್ ಶುಲ್ಕ ಪಡೆಯುವುದು ಹೇಗೆ ಎನ್ನುವುದು ವಾದ. ಈ ಬಗ್ಗೆ ಸಂಬಂಧಿತ ಇಲಾಖೆಗಳು ಗಮನಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸುಬ್ರಹ್ಮಣ್ಯದ ಸಾಮಾಜಿಕ ಮುಂದಾಳು , ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ಸಮಿತಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅವರು ವಿಡಿಯೋ ಸಹಿತ ವಿವರವನ್ನು ಸಾಮಾಜಿಕ ಜಾಲತಾಣಗಳಲ್ಲೂ ನೀಡಿದ್ದಾರೆ. ಇದಕ್ಕೆ ದೇವಸ್ಥಾನ ಸೇರಿದಂತೆ ಸಂಪುಟ ನರಸಿಂಹ ಮಠ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದು ಯಾವ ಜಾಗ ಹಾಗೂ ಸಂಪುಟ ನರಸಿಂಹ ಮಠದ ವತಿಯಿಂದ ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆಯೇ, ದೇವಸ್ಥಾನದ ವತಿಯಿಂದ ಏಕೆ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ ಇತ್ಯಾದಿ ಪ್ರಶ್ನೆಗಳು-ಚರ್ಚೆಗಳು ಎದ್ದಿವೆ.

