ಸುಳ್ಯ:ಮಾಂಸಾಹಾರ ಸೇವಿಸುವ ಮಂದಿಯ ದೈನಂದಿನ ಆಹಾರ ಪಟ್ಟಿಯಲ್ಲಿ ಬಿಟ್ಟಿರಲಾಗದ, ಹೋಟೆಲ್ ಆಹಾರ ಪಟ್ಟಿಯ ಪ್ರಮುಖ ಮೆನುಗಳಲ್ಲೊಂದು ಚಿಕನ್ ಖಾದ್ಯ. ಕೋಳಿ ಮಾಂಸದ ಆಹಾರವನ್ನು ಹೊರತು ಪಡಿಸಿದ ಮಾಂಸಾಹಾರ ಸೇವನೆ ಊಹಿಸಲೂ ಸಾಧ್ಯವಿಲ್ಲ. ವಿವಿಧ ಬಗೆಯ ಚಿಕನ್ ಮೆನುವೇ ಇವರಿಗೆ ಅಚ್ಚು ಮೆಚ್ಚು. ಆದರೆ ಇದೀಗ ಕೋಳಿ ಮಾಂಸದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದು ಚಿಕನ್ ಖಾದ್ಯ ಪ್ರಿಯರಿಗೆ ದೊಡ್ಡ ಹೊಡೆತ ನೀಡುತಿದೆ. ಸುಳ್ಯದಲ್ಲಿ ಕೆಲವು ದಿನಗಳಲ್ಲಿ ಕೋಳಿ ಮಾಂಸದ ಬೆಲೆ ತೀವ್ರ ರೀತಿಯಲ್ಲಿ ಏರುತ್ತಿದ್ದು ಕಳೆದ 15-20 ದಿನಗಳಲ್ಲಿ ಸುಮಾರು 50 ರೂಗಿಂತಲೂ ಏರಿಕೆ ಕಂಡಿದೆ. ಸಾಮಾನ್ಯವಾಗಿ 110-115 ರ ಆಸುಪಾಸಿನಲ್ಲಿದ್ದ

ಬ್ರಾಯಿಲರ್ ಕೋಳಿಯ ರಿಟೇಲ್ ಮಾರಾಟ ದರ ಈಗ 160 ರ ಗಡಿ ದಾಟಿದೆ. ಬುಧವಾರ ಸುಳ್ಯದ ಕೋಳಿ ಅಂಗಡಿಗಳಲ್ಲಿ ದರ ಕೆಜಿಗೆ 160, 165 ರೂಗಳಿತ್ತು. ಅದೇ ಕೋಳಿ ಮಾಂಸದ ದರ ಕೆಜಿಗೆ 230 ಇತ್ತು. ಟೈಸನ್ ಕೋಳಿ ದರ 180, ಊರು ಕೋಳಿ ದರ ಕೆಜಿಗೆ 260 ಇತ್ತು. ಜನರು ಆಹಾರಕ್ಕಾಗಿ ಹೆಚ್ಚು ಬಳಸುವ ಬ್ರಾಯಿಲರ್ ಕೋಳಿ ದರ ಇತ್ತೀಚೆಗೆ ತೀವ್ರ ಗತಿಯಲ್ಲಿ ಏರಿಕೆಯಾಗುತಿರುವುದು ಕಂಡು ಬಂದಿದೆ. ಕೋಳಿ ಉತ್ಪಾದನೆ ಕಡಿಮೆಯಾಗುತಿರುವುದು, ತೀವ್ರ ಉಷ್ಣಾಂಶದ ಏತಿಕೆಯಿಂದ ಕೋಳಿ ಮರಿಗಳು ಸಾಯುವುದು, ಉಷ್ಣಾಂಶದ ಏರಿಕೆಯಿಂದ ಕೋಳಿಗಳು ನಿರೀಕ್ಷಿತ ವೇಗದಲ್ಲಿ ಬೆಳವಣಿಗೆ ಆಗದೆ ಇರುವ ಕಾರಣ ಕೋಳಿ ಮಾಂಸದ ಸರಬರಾಜಿನಲ್ಲಿ ಕೊರತೆ
ಉಂಟಾಗಿರುವುದು ಬೆಲೆ ಏರಿಕೆಗೆ ಕಾರಣವಾಗುತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಮುಂದಿನ ದಿನಗಳಲ್ಲಿಯೂ ದರ ಏರುಗತಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತಿದೆ. ಮೊಟ್ಟೆ ದರವೂ ಏರುಗತಿಯಲ್ಲಿದೆ.
ಕುಸಿಯುತ್ತಿರುವ ಕುಕ್ಕುಟೋದ್ಯಮ:
ಬೆಲೆ ಏರಿಕೆ, ವ್ಯಾಪಾರ ಕುಸಿತದಿಂದ ಕುಕ್ಕುಟೋದ್ಯಮವೇ ಸಂಕಷ್ಟದಲ್ಲಿದೆ ಎನ್ನುತ್ತಾರೆ ವ್ಯಾಪಾರಿಗಳು. ಕೋವಿಡ್ ಹರಡುವಿಕೆ, ಲಾಕ್ ಡೌನ್ ಬಳಿಕ ಮೊದಲಿನ ವ್ಯಾಪಾರ ಇಲ್ಲ ಎಂಬುದು ವ್ಯಾಪಾರಿಗಳ ಅಳಲು. ಈ ಹಿಂದೆ ಇದ್ದ ವ್ಯಾಪಾರದ ಅರ್ಧಕ್ಕೆ, ಕಾಲು ಭಾಗಕ್ಕೆ ವ್ಯಾಪಾರ ಕುಸಿದಿದೆ. ಕೆಲವೊಮ್ಮೆ ಕೆಲಸಗಾರರ ಸಂಬಳ ಸೇರಿ ಅಂಗಡಿ ನಿರ್ವಹಣೆ ಮಾಡುವುದೇ ಕಷ್ಟ ಎನ್ನುತ್ತಾರವರು. ಈಗ ಕಾರ್ಯಕ್ರಮಗಳು ಕಡಿಮೆ ಆಗುತ್ತಿರುವುದು, ಹೋಟೆಲ್ ಉದ್ಯಮದಲ್ಲಿ ವ್ಯಾಪಾರ ಕಡಿಮೆ ಆಗಿರುವುದು ಮತ್ತಿತರ ಕಾರಣಗಳಿಂದ ಕುಕ್ಕುಟ ವ್ಯಾಪಾರ ಕುಸಿದು ಹೋಗಿದೆ.