ಸುಳ್ಯ: ಮಾಂಸ ಪ್ರಿಯರಿಗೆ, ಚಿಕನ್ ಮೆನು ದಿನದ ಆಹಾರದ ಭಾಗವಾಗಿಸಿದವರಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಶಾಕ್.ಲಾಕ್ ಡೌನ್ ಮುಗಿದು ಅಂಗಡಿ ಮುಂಗಟ್ಟುಗಳು ತೆರೆದ ಬಳಿಕ ಪ್ರತಿ ದಿನ ಕೋಳಿ ಮಾಂಸದ ದರ ಏರಿಕೆಯಲ್ಲಿದೆ. ಕಳೆದ ಒಂದು ವಾರದಿಂದ ತೀವ್ರ ಏರಿಕೆ ಕಂಡಿದೆ. ಸುಳ್ಯದ ಕೋಳಿ ಮಾರಾಟ ಅಂಗಡಿಗಳಲ್ಲಿ ಕೋಳಿ ಇಡಿಯಾಗಿ ಖರೀದಿಸಿದರೆ ಬ್ರಾಯಿಲರ್ ಕೋಳಿಗೆ ಕೆ.ಜಿಯೊಂದಕ್ಕೆ ಇಂದು 170ಕ್ಕೆ ಏರಿತ್ತು. ಮಾಂಸ ಖರೀದಿಸುವುದಿದ್ದರೆ
ಕೆ.ಜಿ ಗೆ 250ಕ್ಕೆ ಮುಟ್ಟಿತ್ತು. ಟೈಸನ್ ಕೋಳಿಗೂ ಕೆ.ಜಿ.ಗೆ 170-180 ಆಸುಪಾಸಿನಲ್ಲಿತ್ತು. ಕಳೆದ ಒಂದು ವಾರದ ಹಿಂದೆಯೇ ಕೋಳಿಗೆ ಕೆಜಿಗೆ 150, ಮಾಂಸಕ್ಕೆ 220 ದರ ಇತ್ತು. ಇದೀಗ ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದಂತೆ ಮತ್ತಷ್ಟು ಏರಿಕೆಯಾಗಿದೆ.ಇದರಿಂದ ಮನೆಯಲ್ಲಿನ ಆಹಾರ ಖರ್ಚು, ಹೋಟೆಲ್ ಗಳ ಬಿಲ್ ಏರಿಕೆಯಾಗಲಿದೆ.ಕೋಳಿಯ ಸರಬರಾಜಿನಲ್ಲಿ ಕೊರತೆ ಉಂಟಾದ ಕಾರಣ ಈಗ ಇಷ್ಟು ತೀವ್ರ ದರ ಏರಲು ಕಾರಣವಾಗುತಿದೆ.ಲಾಕ್ ಡೌನ್, ಕೋವಿಡ್ ಭೀತಿಯ ಕಾರಣದಿಂದ ಕಳೆದ ಒಂದೆರಡು ತಿಂಗಳಲ್ಲಿ ಕೋಳಿ ಮರಿ ಉತ್ಪಾದನೆ ಮತ್ತು ಸಾಕಣೆಯಲ್ಲಿ ತೀವ್ರ ಇಳಿಕೆ ಉಂಟಾಗಿತ್ತು. ಇದರಿಂದ ಈಗ ಕೋಳಿಯ ಸರಬರಾಜಿನಲ್ಲಿ ಕೊರತೆ ಎದುರಾಗಿದೆ.ಇದರಿಂದ ಬೇಡಿಕೆ ಹೆಚ್ಚಿದ ಕಾರಣ ಸ್ವಾಭಾವಿಕವಾಗಿ ಬೆಲೆಯೂ ಏರಿಕೆಯಾಗಿದೆ ಎಂದು ಕೋಳಿ ವ್ಯಾಪಾರಿಗಳು ಹೇಳುತ್ತಾರೆ. ಹೊಸತಾಗಿ ಮರಿ ಬೆಳೆದು ಸರಬರಾಜು ಹೆಚ್ಚಾಗಿ ಮಾರುಕಟ್ಟೆ ಸ್ಥಿರವಾಗುವ ತನಕ ಮಾರುಕಟ್ಟೆಯಲ್ಲಿ ಈ ಕೋಳಿ ಮಾಂಸದ ದರ ಏರು ಗತಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ. ಕೋಳಿ ಆಹಾರದ ಬೆಲೆ ಮತ್ತಿತರ ಖರ್ಚು ಅಧಿಕವಾಗಿದ್ದು ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ.ಇದು ಕೂಡ ದರ ಹೆಚ್ಚಲು ಕಾರಣವಾಗಿದೆ. ಕೆಲವೆಡೆ ಬೇಡಿಕೆ ಹೆಚ್ಚಿದಂತೆ
ದರವೂ ಹೆಚ್ಚುತ್ತಿರುವ ಬಗ್ಗೆ ದೂರುಗಳು ಇದೆ. ಕೋಳಿ ಮಾಂಸ ಮಾತ್ರವಲ್ಲದೆ ಮೊಟ್ಟೆಯ ದರ ಕೂಡ ತೀವ್ರ ಏರಿಕೆ ಕಂಡಿದ್ದು ಇದುವರಗಿನ ದರದ ದಾಖಲೆ ಮುರಿದಿದೆ. ಮಾಂಸಾಹಾರಿಗಳ ಮನೆಯ ಡೈನಿಂಗ್ ಟೇಬಲ್ ನ ಅನಿವಾರ್ಯ ವಸ್ತುವಾದ ಮೊಟ್ಟೆ ಇಂದು ದುಬಾರಿಯಾಗಿ ಪರಿಣಮಿಸಿದೆ. ರೂ.6.30, 7 ರೂ ಒಂದು ಮೊಟ್ಟೆಯ ದರ ಇದೆ. ಇತರ ಮಾಂಸಾಹಾರಗಳು, ತರಕಾರಿ ಸೇರಿದಂತೆ ಎಲ್ಲಾ ಆಹಾರ ವಸ್ತುಗಳ ಬೆಲೆಯೂ ಕಳೆದ ಒಂದು ತಿಂಗಳಲ್ಲಿ ಏರಿಕೆಯಾಗಿದ್ದು ಮನೆಯ ಖರ್ಚು ದುಪ್ಪಟ್ಟಾಗಿದೆ ಎಂದು ಜನ ಸಾಮಾನ್ಯರು ಅಳಲು ತೋಡಿಕೊಳ್ಳುತ್ತಿದ್ದಾರೆ.