*ಗಂಗಾಧರ ಕಲ್ಲಪಳ್ಳಿ
ಸುಳ್ಯ: ಮೀಸಲು ಕ್ಷೇತ್ರವಾದ ಮಲೆನಾಡು ಸುಳ್ಯದಿಂದ ಸತತ ಆರು ಬಾರಿ ಗೆಲುವು ಸಾಧಿಸಿ ನಿರಂತರ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಶಾಸಕ ಅಂಗಾರರಿಗೆ ಇದೀಗ ಎರಡನೇ ಬಾರಿ ಸಚಿವ ಸ್ಥಾನ ಒಲಿದು ಬಂದಿದೆ. ಸುದೀರ್ಘ 27 ವರುಷಗಳ ಕಾಲ ಶಾಸಕರಾಗಿದ್ದ ಅಂಗಾರ ಕಳೆದ ಜನವರಿಯಿಂದ ಸಚಿವ ಅಂಗಾರ ಆಗಿದ್ದದರು. ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಅಂಗಾರ ಅವರಿಗೆ ಸಚಿವ ಸ್ಥಾನ ನಷ್ಟವಾಯಿತು. ಇದೀಗ ನಿರೀಕ್ಷೆಯಂತೆ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಅಂಗಾರರು ಮತ್ತೊಮ್ಮೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಲವು ವರುಷಗಳ ಕಾಲ ಕಾದ ಬಳಿಕ ದೊರೆತ ಸಚಿವ ಸ್ಥಾನ ಕೇವಲ ಎಂಟು ತಿಂಗಳಲ್ಲಿ ನಷ್ಟವಾದಾಗ ರಾಜ್ಯ ರಾಜಕೀಯದ ಸ್ಥಿತ್ಯಂತರಗಳ ಮಧ್ಯೆ ಮತ್ತೊಮ್ಮೆ ಸಚಿವರಾಗುತ್ತಾರಾ ಅಥವಾ ಕೈ ತಪ್ಪುತ್ತದಾ ಎಂಬ ಒಂದು ಜಿಜ್ಞಾಸೆ ಇತ್ತು. ಆದರೆ ಜಿಜ್ಞಾಸೆಗೆ ತೆರೆ ಎಳೆಯಲಾಗಿದ್ದು ನಿರೀಕ್ಷೆಯಂತೆ ಅಂಗಾರರು ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಂಗಾರರ ಜೈತ್ರಯಾತ್ರೆ: 1989ರಲ್ಲಿ ಪ್ರಥಮ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಪರಾಭವಗೊಂಡರು. ಆದರೆ 1994 ರಿಂದ ಬಳಿಕ ಹಿಂತಿರುಗಿ ನೋಡಿಲ್ಲ.1994,1999,2004, 2008,2013, 2018 ಹೀಗೆ ಆರು ಭಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಶಾಸಕರಾಗಿ ಸರಳ ಮತ್ತು ಸಜ್ಜನ ರಾಜಕಾರಣಿ ಎಂಬ ಹೆಸರು ಪಡೆದರು. ಹಲವು ಬಾರಿ ಸಚಿವ ಸ್ಥಾನ ನಿರೀಕ್ಷಿಸಿ ಕೈ ತಪ್ಪಿದ್ದರೂ ಕಳೆದ

ಜನವರಿಯಲ್ಲಿ ಅನಿರೀಕ್ಷಿತವಾಗಿ ಅಂಗಾರರನ್ನು ಅರಸಿ ಸಚಿವ ಸ್ಥಾನ ಬಂದಿತ್ತು. ಇದೀಗ ಮತ್ತೊಮ್ಮೆ ಅವಕಾಶ ಲಭಿಸಿದೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವ:
ನಿರಂತರ ಆರು ಬಾರಿ ಶಾಸಕರಾಗಿ ಆಯ್ಕೆಯಾದರೂ ಸರಳ ಮತ್ತು ಪ್ರಾಮಾಣಿಕ ರಾಜಕಾರಣಿ ಎಂಬ ಹೆಸರು ಪಡೆದ ಅಪರೂಪದ ವ್ಯಕ್ತಿತ್ವ ಸುಳ್ಯದ ಬಂಗಾರ ಎಂದೇ ಪ್ರಸಿದ್ಧರಾದ ಎಸ್.ಅಂಗಾರ ಅವರದ್ದು.ಮೊದಲ ಬಾರಿ ಸ್ಪರ್ಧಿಸಿದ ಚುನಾವಣೆಯಲ್ಲಿ ಸೋಲನುಭವಿಸಿದರೂ , ಮತ್ತಷ್ಟು ಹುರುಪಿನಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅಂಗಾರರು 1994 ರ ಬಳಿಕ ಇಂದಿನ ತನಕ ನಡೆದ ಎಲ್ಲಾ ಚುನಾವಣೆಗಳಲ್ಲಿ ನಿರಂತರ ಗೆಲುವು ಸಾಧಿಸಿ ಆರನೇ ಅವಧಿಗೆ ವಿಧಾನ ಸಭೆ ಪ್ರವೇಶಿಸಿದರು. ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆಯ ಚನಿಯ ಮತ್ತು ಶ್ರೀಮತಿ ಹುಕ್ರುರವರ ಮಗನಾಗಿ 01-07-1964 ರಂದು ಅಂಗಾರರ ಜನನ. ಬಡತನದಲ್ಲಿಯೇ ಬಾಲ್ಯ ಕಳೆದರು. ಅಪ್ಪ , ಅಮ್ಮ ಕೂಲಿ ಕೆಲಸ ಮಾಡಿ ಮಗನನ್ನು ಪ್ರೌಢ ಶಿಕ್ಷಣದವರೆಗೆ ಓದಿಸಿದರು . ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ ಕೂಲಿ ಕಾರ್ಮಿಕನಾಗಿ ದುಡಿಯಲು ಆರಂಭ.ಆ ದಿನಗಳಲ್ಲಿ ಅಂಗಾರರಿಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಪರ್ಕ ಹೊಂದುವ ಅವಕಾಶ. ತಳೂರು ಚಂದ್ರಶೇಖರರ ಮಾರ್ಗದರ್ಶನದಲ್ಲಿ ಸಂಘದ ದೈನಂದಿನ ಶಾಖೆಗಳ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಬಳಿಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವಾ ಜೀವನ ಆರಂಭಿಸಿದರು. 1979 ರಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ

ನಿಯುಕ್ತರಾದರು . ಮುಂದೆ ಪಕ್ಷದ ತಾಲೂಕು ಕಾರ್ಯದರ್ಶಿಯಾಗಿ , ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾಗಿ , ರಾಜ್ಯ ಸಮಿತಿ ಸದಸ್ಯರಾಗಿ ದುಡಿದು 1989 ರ ಬಳಿಕ ಚುನಾವಣಾ ಕಣಕ್ಕೆ ಇಳಿದರು. ಪತ್ನಿ ವೇದಾವತಿ , ಪುತ್ರ ಗೌತಮ್ , ಪುತ್ರಿ ಪೂಜಾಶ್ರೀ.
ಅಭಿವೃದ್ಧಿ ನಿರೀಕ್ಷೆಯಲ್ಲಿ ಸುಳ್ಯ:
ಸುಳ್ಯದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ,ಬಸ್ ಡಿಪೊ, ಸುಸಜ್ಜಿತ ಅಗ್ನಿ ಶಾಮಕ ಠಾಣೆ , ತಾಲೂಕಿನಾದ್ಯಂತ ಹಲವು ವಿದ್ಯಾರ್ಥಿನಿಲಯಗಳು , ಸುಳ್ಯದಲ್ಲಿ ಪ್ರಥಮ ದರ್ಜೆ ಕಾಲೇಜು , ಮೊರಾರ್ಜಿ ವಸತಿ ಶಾಲೆ , ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಅನುದಾನ , ಮಿನಿ ವಿಧಾನ ಸೌಧ ನಿರ್ಮಾಣ , ಸುಳ್ಯದ ಸಮುದಾಯ ಆರೋಗ್ಯ ಕೇಂದ್ರದ ಮೇಲ್ದರ್ಜೆಗೇರಿಕೆ, ಲೋಕೋಪಯೋಗಿ ಇಲಾಖೆ ಉಪವಿಭಾಗ ಆರಂಭ , ಗ್ರಾಮೀಣ ರಸ್ತೆಗಳ ಅಭಿವೃದ್ಧಿ , ಜಾಲ್ಲೂರು- ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ , ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಮಂಜೂರಾತಿ,ಹಲವು ಸೇತುವೆಗಳ ರಚನೆ, ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳು ಅಂಗಾರರವರ ಶಾಸಕಾವಧಿಯಲ್ಲಿ

ಕಾರ್ಯರೂಪಕ್ಕೆ ಬಂದಿದೆ. ನೂತನ ಕಡಬ ತಾಲೂಕು ಅಸ್ತಿತ್ವಕ್ಕೆ ಬಂದಿದೆ. ಅಂಗಾರರು ಮತ್ತೆ ಸಚಿವರಾಗಿ ಅಧಿಕಾರಕ್ಕೇರಿರುವುದು ಸ್ವಾಭಾವಿಕವಾಗಿ ಕ್ಷೇತ್ರದ ಜನತೆಯ ಅಭಿವೃದ್ಧಿ ಕನಸುಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಸುಳ್ಯಕ್ಕೆ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಅನುಷ್ಠಾನ, ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ, ಅಡಕೆ ಹಳದಿ ರೋಗದಿಂದ ಕೃಷಿ ನಾಶವಾದ ಕೃಷಿಕರಿಗೆ ಸೂಕ್ತ ಪರಿಹಾರ ಹೀಗೆ ಹಲವು ಅಭಿವೃದ್ಧಿ ನಿರೀಕ್ಷೆಗಳು ಗರಿಗೆದರಿದೆ. ಕಡಬ ತಾಲೂಕು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕಾಗಿದೆ. ಅಂಗಾರರು ಮತ್ತೊಮ್ಮೆ ಅಧಿಕಾರಕ್ಕೆ ಏರಿರುವ ಹಿನ್ನಲೆಯಲ್ಲಿ ಕ್ಷೇತ್ರದ ಜನರ ನಿರೀಕ್ಷೆಗಳು ಬಾನೆತ್ತರಕ್ಕೆ ಜಿಗಿದಿದೆ.