ಕೊಡಗಿನ ಅದ್ಭುತ ಪ್ರಕೃತಿ ಸೌಂದರ್ಯವನ್ನು ತನ್ನೊಳಗಡಗಿಸಿ ಭೂರಮೆಯ ಸ್ವರ್ಗ ಎಂದೇ ಪ್ರಸಿದ್ಧವಾದ ಗಿರಿ ಶೃಂಗ ಮಾಂದಲಪಟ್ಟಿಯಲ್ಲಿ ಈಗ ನೀಲ ಕುಸುಮಗಳು ವರ್ಣ ಚಿತ್ತಾರ ಬಿಡಿಸಿದೆ. ಕಲಾವಿದನ ಕುಂಚದಲ್ಲಿ ಅರಳಿದ ನೀಲಿ ವರ್ಣದಂತೆ ಪುಷ್ಪ ರಾಶಿ ಬೆಟ್ಟ ಪೂರ್ತಿ ಅರಳಿ ನಿಂತಿದೆ. ಅತಿ ಅಪರೂಪದ ಮತ್ತು ಹಲವು ವರುಷಗಳ ಅಂತರದಲ್ಲಿ ಅರಳುವ ಕುರಿಂಜಿ ಎಂಬ ಪ್ರಭೇದಕ್ಕೆ ಸೇರಿದ ಪುಷ್ಪಗಳು ಇವು ಎಂದು ಹೇಳಲಾಗಿದ್ದು ಮಾಂದಲಪಟ್ಟಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಸಾಲು ಸಾಲು ಬೆಟ್ಟಗಳಲ್ಲಿ ಪ್ರಕೃತಿ

ಬಿಡಿಸಿದ ಹಸಿರ ಚಿತ್ರದ ಮಧ್ಯೆ ಈ ಅಪರೂಪದ ಹೂವುಗಳು ನೀಲಿ ಬಣ್ಣ ಚೆಲ್ಲಿದಂತಿದ್ದು ಸುಂದರ ದೃಶ್ಯ ಕಾವ್ಯ ಸೃಷ್ಟಿಸಿದೆ. ಪ್ರಕೃತಿ-ಮಂಜು-ಮಳೆ-ಹಚ್ಚ ಹಸಿರ ಸೌಂದರ್ಯ ರಾಶಿಯ ಮಧ್ಯೆ ಸದಾ ಜುಗಲ್ ಬಂಧಿಯಾಗುವ ಮಾಂದಲ ಪಟ್ಟಿಯ ಸೌಂದರ್ಯಕ್ಕೆ ನೀಲಿ ಪುಷ್ಪಗಳು ಮತ್ತಷ್ಟು ಮೆರುಗು ತಂದಿದೆ. ಎತ್ತರದ ಗುಡ್ಡದಲ್ಲಿ ಅರಳುವ ಕುರಿಂಜಿ ಹೂವುಗಳು ಹಲವು ವರ್ಷಗಳ ಅಂತರದಲ್ಲಿ ಅರಳುವ ಬಲು ಅಪರೂಪ ಮತ್ತು ವರ್ಣನಾತೀತ ಸೌಂದರ್ಯದ ರಾಶಿ. ಇದರಲ್ಲಿ ಹಲವಾರು ಪ್ರಭೇದಗಳಿವೆ. ಹೂ ಬಿಡುವ ಸಮಯದಲ್ಲಿಯೂ ಭಿನ್ನತೆ ಇದೆ.12 ವರ್ಷಗಳಿಗೊಮ್ಮೆ ಹೂ ಬಿಡುವ ನೀಲ ಕುರಿಂಜಿ ಬಲು ಪ್ರಸಿದ್ಧ. ಕೆಲವು 12 ವರ್ಷಕ್ಕೊಮ್ಮೆ ಅರಳಿದರೆ ಇನ್ನು ಕೆಲವು 5-6 ವರ್ಷಗಳಿಗೊಮ್ಮೆ ಅರಳುತ್ತವೆ ಎಂದು

ಹೇಳಲಾಗಿದೆ.ಅಂತೂ ಮಾಂದಲಪಟ್ಟಿಯಲ್ಲಿ ಮಾತ್ರ ನೀಲ ವರ್ಣದ ಈ ಕುಸುಮಗಳು ಸೌಂದರ್ಯ ರಾಶಿಯನ್ನು ಚೆಲ್ಲಿದೆ. ಈ ಹೂವುಗಳ ಸೌಂದರ್ಯವನ್ನು ಆಸ್ವಾದಿಸಲು ಹಲವಾರು ಮಂದಿ ಮಾಂದಲಪಟ್ಟಿಯನ್ನು ಅರಸಿ ಬರುತ್ತಿದ್ದಾರೆ. ವಾರಾಂತ್ಯ ಕರ್ಫ್ಯೂ ದಿನಗಳಾದ ಶನಿವಾರ ಮತ್ತು ಭಾನುವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಮಾಂದಲಪಟ್ಟಿಗೆ ಪ್ರವೇಶ ನೀಡಲಾಗುತ್ತದೆ.
ಅಗಣಿತ ಸೌಂದರ್ಯದ ಖನಿ ಈ ಮಾಂದಲಪಟ್ಟಿ:
ಕೊಡಗು ಜಿಲ್ಲೆ ಎಂದ ತಕ್ಷಣ ಕಣ್ಣೆದುರು ಮೂಡಿಬರುವುದು ಅಲ್ಲಿನ ವರ್ಣನಾತೀತ ನಿಸರ್ಗ ಸೌಂದರ್ಯ. ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುವ ಇಲ್ಲಿನ ಪರಿಸರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ

ಸೆಳೆಯುತ್ತದೆ. ಆದುದರಿಂದಲೇ ಕೊಡಗು ಪ್ರಕೃತಿ ಆರಾಧಕರ, ಮಳೆ, ಮಂಜು ಆಸ್ವಾಧಕರ, ಟ್ರಕ್ಕಿಂಗ್ ಪ್ರಿಯರ ಅಚ್ಚುಮೆಚ್ಚಿನ ತಾಣ. ಅದರಲ್ಲೂ ಮುತ್ತು ಪೋಣಿಸಿದಂತೆ ಅನಂತವಾಗಿ ಹರಡಿರುವ ಹಸಿರು ಗಿರಿಶೃಂಗಗಳ ಸಾಲು ಮಾಂದಲಪಟ್ಟಿ ಕೊಡಗಿನ ಸೌಂದರ್ಯದ ಖನಿ. ಕಲಾವಿದನ ಕುಂಚದಲ್ಲಿ ಅರಳಿದ ಸುಂದರ ಚಿತ್ರಗಳಂತೆ ಇಲ್ಲಿಯ ಪ್ರತಿಯೊಂದು ಭಾಗವೂ ಪ್ರವಾಸಿಗರ ಮನಸೂರೆಗೊಳ್ಳುತ್ತದೆ . ಮಾಂದಲಪಟ್ಟಿಯ ಬೆಟ್ಟದ ತುತ್ತ ತುದಿಗೆ ತಲುಪಿದಾಗ ನಾವು ಆಕಾಶವನ್ನು ಮುಟ್ಟುತ್ತಿದ್ದೇವೆ ಎಂಬಂತೆ ಭಾಸವಾಗುತ್ತದೆ. ಕ್ಷಣಮಾತ್ರದಲ್ಲಿ ನಮ್ಮನ್ನು

ಮುತ್ತಿಕೊಳ್ಳುವ ಮಂಜು ಇಡೀ ಪ್ರದೇಶದಲ್ಲಿ ಹಾಲ್ನೊರೆ ಹರಡಿದಂತೆ ಬಿಳಿ ಚಿತ್ತಾರ ಬಿಡಿಸುತ್ತದೆ. ಕೆಲವೇ ಕ್ಷಣದಲ್ಲಿ ಮಂಜು ಮಾಯವಾಗಿ ಪ್ರಕೃತಿಯ ಹಸಿರು ವೈಭವ ತೆರೆದು ಕೊಳ್ಳುತ್ತದೆ. ಮರುಕ್ಷಣ ಸೂರ್ಯ ರಶ್ಮಿಗಳು ಹರಿದು ಬಂದರೆ.. ನೋಡ.. ನೋಡುತ್ತಿದ್ದಂತೆ ಮಳೆಯ ಕಣಗಳು ಪ್ರದೇಶವನ್ನು ತಬ್ಬಿಕೊಳ್ಳುತ್ತದೆ. ಹೀಗೆ ಮಾಂದಲಪಟ್ಟಿಯ ಸೌಂದರ್ಯ ವರ್ಣನಾತೀತ. ಕೆಲವೇ ಕ್ಷಣದಲ್ಲಿ ವೈವಿಧ್ಯ ಸೌಂದರ್ಯವನ್ನೂ, ಭಿನ್ನವಾದ ವಾತಾವರಣವನ್ನೂ ಆಸ್ವಾದಿಸಲು ಸಾಧ್ಯವಾಗುತ್ತದೆ ಎಂಬುದು ಇಲ್ಲಿನ ವಿಶೇಷತೆ. ಹಸಿರು ಬೆಟ್ಟದ ಸಾಲುಗಳ ಮೇಲೆ ಹತ್ತಿಯ ಮುದ್ದೆಗಳಂತೆ ರಾಶಿ ಬಿದ್ದ ಮೋಡಗಳು. ಬಿಳಿಯ ಮೊಲಗಳು ಓಡುತ್ತಿದೆಯೇ ಎಂದು ಭಾಸವಾಗುವ ಚಲಿಸುವ ಮೇಘಗಳು ಮೋಹಕವಾಗಿದೆ. ಭೂಮಿಯ ಎಲ್ಲಾ

ಸೌಂದರ್ಯವನ್ನೂ ತನ್ನ ಒಡಲಲ್ಲಿರಿಸಿ ಬೀಗುವ ಮಾಂದಲಪಟ್ಟಿಯ ಸುಂದರ ಪ್ರಕೃತಿಯಲ್ಲಿ ಮನಸ್ಸು ಲೀನವಾದಾಗ ಭೂಮಿಯಲ್ಲಿಯೇ ಸ್ವರ್ಗವನ್ನು ಕಂಡಂತೆ ಮೈ-ಮನ ಪುಳಕಗೊಳ್ಳುತ್ತದೆ. ಪಶ್ಚಿಮ ಘಟ್ಟದ ಪುಷ್ಪಗಿರಿ ವನ್ಯಧಾಮದಲ್ಲಿರುವ ಮಾಂದಲಪಟ್ಟಿ ಮಡಿಕೇರಿ ನಗರದಿಂದ 24 ಕಿ.ಮಿ.ದೂರದಲ್ಲಿದೆ. ಮಾಂದಲಪಟ್ಟಿಯ ಸೌಂದರ್ಯ ಕನ್ನಡ,ಮಲಯಾಳಂ ಸೇರಿ ಹಲವು ಭಾಷೆಗಳ ಚಲನಚಿತ್ರಗಳ ಮೂಲಕವೂ ಪರದೆಯ ಮೇಲೆ ರಾರಾಜಿಸಿದೆ. ಈಗ ನೀಲ ಕುಸುಮಗಳ ರಾಶಿ ಮಾಂದಲಪಟ್ಟಿಯನ್ನು ಮಧುವಣಗಿತ್ತಿಯಂತೆ ಅಣಿಗೊಳಿಸಿದೆ..
