*ಶಿವಸುಬ್ರಹ್ಮಣ್ಯ ಕಲ್ಮಡ್ಕ
ಕೆಲವು ದಿನಗಳ ಕಾಲ ಅವಿರತ ಶ್ರಮದಿಂದ ಕಟ್ಟಿದ ಗೂಡು. ಇನ್ನೇನು ಕೊನೇ ಹಂತಕ್ಕೆ ಬಂದಿದೆ.ಗೂಡಿನ ಸುತ್ತ ತಿರುಗಿ ಗಟ್ಟಿಮುಟ್ಟಾಗಿ ಆಗಿದೆಯೇ ಎಂದು ನೋಡಿ ಆಯ್ತು. ಅಕ್ಕಪಕ್ಕದಲ್ಲೂ ಗೂಡು ನಿರ್ಮಾಣ ಆಗುತ್ತಿದೆ. ಸಂಗಾತಿ ತನಗೆ ಕೈ ತಪ್ಪಿ ಬೇರೆ ಗೂಡನ್ನು ಆಯ್ಕೆ ಮಾಡಿದರೆ ಸಂಸಾರದ ಸುಖವೇ ಇಲ್ಲವಾಗಬಹುದು ಎಂಬ ಚಡಪಡಿಕೆ ಶುರು. ಸಮಯ ವ್ಯರ್ಥ ಮಾಡಬಾರದು.ಸಂಗಾತಿಯ ಹತ್ತಿರ ಬರುವಂತೆ ಆಕರ್ಷಿಸಲೇಬೇಕು ಎಂಬ ಪಣ ತೊಟ್ಟ ಗಂಡು ಹಕ್ಕಿ ಗೂಡಿನ ಅಂಚಲ್ಲಿ ಕುಳಿತು ಬಾ.. ಬಾ… ಎಂದು ಕರೆಯತೊಡಗಿತು.
ತಕ್ಷಣದ ಪ್ರತಿಕ್ರಿಯೆ ಕಾಣದೇ ಇದ್ದಾಗ ಗಂಡಿನ ಚಡಪಡಿಕೆ ಹೆಚ್ಚಿತು. ಹೆಣ್ಣಿನ ನಿರೀಕ್ಷೆಯಲ್ಲೇ ಇದ್ದ ಗಂಡಿಗೆ ವೇದನೆ ಹೆಚ್ಚಾಯಿತು.
ಅದು ಸಣ್ಣ ಕೆರೆ. ಕೆರೆಯ ಬದಿಯಲ್ಲಿ ಹಿಪ್ಪು ನೇರಳೆ ಮರ. ಸ್ವಲ್ಪ ಹೆಚ್ಚು ಕಡಿಮೆಯಾದರೂ ನೀರಿಗೇ

ಬೀಳೋದು. ಆದ್ದರಿಂದ ನೀರಿನ ಮೇಲಿರುವ ರೆಂಬೆಗಳಲ್ಲಿ ಜೋತಾಡುತ್ತಿದ್ದರೂ, ಅದು ಗಟ್ಟಿಯಾಗಿದ್ದರೆ ಸರಿ. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಒಂದು ಬಾರಿ ಗೂಡು ಗಟ್ಟಿಯಾಗಿದೆಯೇ ಎಂದು ಪರಿಶೀಲಿಸಿ ಆಯಿತು ಕೂಡಾ. ಗೂಡಿನ ಬುಡ ಗಟ್ಟಿಯಾಗಿಯೇ ಇದೆಯಲ್ಲ, ಒಳಗೆ ಕೋಣೆಯೂ ಚೆನ್ನಾಗಿದೆ, ಹೊರಗಿನ ಪದರ ಒಳಗೆ ಬೆಚ್ಚಗಿರಲೆಂದೇ ಹೆಣೆಯಲಾಗಿದೆ, ಇನ್ನೇನು ಕೊರತೆ? ಹೆಣ್ಣು ಸಿಗಲು ಗಂಡಿನ ಪ್ರಯತ್ನ ಅಷ್ಟಿಷ್ಟಲ್ಲ.ಇದು ಪ್ರಾಣಿ, ಪಕ್ಷಿ ಸಂಕುಲವಲ್ಲದೆ ಮನುಷ್ಯರಲ್ಲಿ ಇದ್ದದ್ದೇ!
ವರ್ಕೋಡಿನ ದೊಡ್ಡ ಕೆರೆ ಸಮೀಪದ ಗದ್ದೆಯಲ್ಲಿ ಇದ್ದ ಪುಟ್ಟ ಕೆರೆಯ ಬದಿಯ ಹಿಪ್ಪು ನೇರಳೆ ಮರದ ತುಂಬಾ ಇದ್ದ ಗೀಜಗ ಗೂಡುಗಳಲ್ಲಿ ಒಂದು ಗೂಡಿನ ನಿರ್ಮಾಣವನ್ನು ಸತತ ಮೂರು ದಿನಗಳಿಂದ ನಾನು ಗಮನಿಸುತ್ತಿದ್ದೆ. ನನಗೂ ಗೂಡಿಗೂ ಇದ್ದ ಅಂತರ ಹೆಚ್ಚೆಂದರೆ ಹದಿನೈದು ಅಡಿ. ಆದರೆ, ಗೂಡಿಗೆ ನನ್ನಿಂದಲೂ ಅಪಾಯವಿಲ್ಲ ಎಂಬುದು ಗಂಡು ಗೀಜಗ ಹಕ್ಕಿಗೆ ಖಚಿತವಾಗಿ ತಿಳಿದಿತ್ತು. ಅದು ಧೈರ್ಯದಿಂದಲೇ ಇತ್ತು.ಗೂಡನ್ನು ಕೀಳಲು ನಾನು ಪ್ರಯತ್ನಿಸಿದರೆ ಕೆರೆಯಲ್ಲಿ ಮುಳುಗುವುದೂ ಖಚಿತ!
ಮೂರೂ ದಿನ ಗೂಡಿನ ಸಮೀಪವೇ ಟ್ರೈಪಾಡ್ ಗೆ ಕ್ಯಾಮೆರಾ , ಲೆನ್ಸ್ ಫಿಕ್ಸ್ ಮಾಡಿ ಕಾಯುತ್ತಿದ್ದೆ. ಅದೆಲ್ಲೋ

ಹಾರಿ ಹೋಗಿ ಹುಲ್ಲು, ನಾರು, ಬಳ್ಳಿ ತರುತ್ತಿತ್ತು. ಚೆನ್ನಾಗಿ ಹೆಣೆದು, ಉರುಳು ಹಾಕಿ ಗೂಡು ಕಟ್ಟುವ ಒಟ್ಟಾರೆ ಪ್ರಕ್ರಿಯೆ ನೋಡುವುದೇ ವಿಶೇಷ ಅನುಭವ. ಮೂರನೇ ದಿನ.. ಅಂದು ಬೆಳಿಗ್ಗೆಯೇ ಠಿಕಾಣಿ ಹೂಡಿದ್ದೆ. ಬೆಳಕು ಕಡಿಮೆ ಇತ್ತು. ಚೆನ್ನೈಯಲ್ಲಿ ಭಾರಿ ಮಳೆ. ಬೆಂಗಳೂರು, ಮೈಸೂರಲ್ಲಿ ಹನಿ ಮಳೆ. ಬೀಸು ಗಾಳಿ. ಮಳೆಗೆ ನಾನೂ ಸಿಲುಕುವೆನೋ ಎಂಬ ಆತಂಕ ಇತ್ತು. ಆದರೆ ಇದರ ಪರಿವೆಯೇ ಇಲ್ಲದೆ ಗೂಡು ನಿರ್ಮಾಣದ ಅಂತಿಮ ಕೆಲಸದಲ್ಲಿ ಗಂಡು ನಿರತವಾಗಿತ್ತು. ಅಕ್ಕ ಪಕ್ಕ ಅನೇಕ ಪೂರ್ಣಗೊಂಡ ಮತ್ತು ಪೂರ್ಣಗೊಳ್ಳುತ್ತಿದ್ದ ಗೂಡುಗಳು ಇದ್ದವು. ಫೋಟೋ ಚೆನ್ನಾಗಿ ಸಿಗಲಿ ಎಂದು ಒಂದೇ ಗೂಡಿಗೆ ಕ್ಯಾಮೆರಾ ಗುರಿ ಇಟ್ಡಿದ್ದೆ.
ತಕ್ಷಣ ಗಂಡಿನ ಕೂಗು ಹೆಚ್ಚಾಯಿತು. ಹೆಣ್ಣು ಹಕ್ಕಿಗಳನ್ನು

ಕರೆಯಲು ಆರಂಭಿಸಿತ್ತು. ಸಿಂಗಲ್ ಬೆಡ್ ರೂಮೋ, ಡಬಲ್ ಬೆಡ್ ರೂಮೋ, ಬಂಗಲೆಯೋ…. ಏನು ಹೇಳಿತೋ ನನಗೆ ತಿಳಿಯಲಿಲ್ಲ. ಆದರ ಕೂಗು ಮಾತ್ರ ‘ ನನ್ನ ಮನೆಗೆ ಬಾ…ಬಾ…’ ಎಂದು ಕರೆಯುತ್ತಿರುವುದು ಎಂದು ಖಚಿತವಾಗಿ ಮತ್ತು ಸರಳವಾಗಿ ಪಕ್ಷಿಪ್ರಿಯನಾದ ನನಗೆ ತಿಳಿಯಿತು. ಹೊಸದಾಗಿ ಹೆಣ್ಣನ್ನು ಕೈ ಹಿಡಿಯುವ ಅತಿ ಉತ್ಸಾಹ ಗಂಡಿನಲ್ಲಿ ಎದ್ದು ಕಾಣುತ್ತಿತ್ತು. ವಿಪರೀತ ಗಾಳಿಯಿಂದ ನಾನೂ ಆತಂಕಕ್ಕೆ ಈಡಾದೆ. ಹೆಚ್ಚು ಕಮ್ಮಿಯಾದ್ರೆ ನಾನು ಕ್ಯಾಮೆರಾ, ಲೆನ್ಸ್ ಸಮೇತ ಕೆರೆಯೊಳಗೆ! ಆದ್ದರಿಂದ ಮೂರ್ನಾಲ್ಕು ಅಡಿ ಹಿಂದಕ್ಕೆ ಬಂದು ಕುಳಿತೆ. ಗಾಳಿಯ ರಭಸ ಹೆಚ್ಚಾಗುತ್ತಾ

ಹೋಯಿತು. ಕ್ಲಿಕ್ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಬೆಚ್ಚಗಿದೆ ಗಾಳಿ. ಇಲ್ಲಿ ಗೂಡೊಂದು ಸಿದ್ದವಾಗಿದೆ. ಸುಂದರ ಗಂಡು ಅಲ್ಲೇ ಇದೆ. ಮೂರುದಿನಗಳಿಂದ ಕಾಡುತ್ತಾ ಇದ್ದಾನೆ. ಗೂಡಿನ ಬಾಗಿಲು ತೆರೆದಿದೆ. ಥಟ್ಟನೆ ಒಳ ಸೇರಿದರೆ ಸಂಸಾರ ಮಾಡಬಹುದು. ಬಾಗಿಲಲ್ಲೇ ನಿಂತು ಕರೆಯುತ್ತಿರುವ ಗಂಡಿಗೆ ಸಮ್ಮತಿ ಸೂಚಿಸಲೇ…..
ಹೆಣ್ಣು ಗೀಜಗ ಹತ್ತಿರದ ರೆಂಬೆ ಯಲ್ಲಿ ಕುಳಿತು ಯೋಚಿಸತೊಡಗಿತು. ಆದರೆ ರಭಸವಾಗಿ ಬೀಸುತ್ತಿದ್ದ ಗಾಳಿ ತಕ್ಷಣ ಹಾರಲು ಅಡ್ಡಿ ಆಗಿತ್ತು. ಗೂಡು- ಗಂಡು-ಹೆಣ್ಣು ಮಧ್ಯೆ ಆಗಾಗ ನುಗ್ಗುವ ಗಾಳಿ ಎರಡು ಹಕ್ಕಿಗಳ ಸಮ್ಮಿಲನಕ್ಕೆ ಅಡ್ಡಿಯಾಗಿತ್ತು.. ಏನೋ ಅಚ್ಚರಿ ನಡೆಯಬಹುದು. ಹೆಣ್ಣು ಹಾರಿ ಬಂದು ಗೂಡಿನ ಬಾಗಿಲಿಗೆ ಬರಬಹುದು. ಗಂಡು ಹೆಮ್ಮೆಯಿಂದ ಬೀಗುತ್ತ ಒಳಸೇರಿಸಬಹುದು. ಆ ದೃಶ್ಯ ಕ್ಯಾಮೆರಾದಲ್ಲಿ

ಸೇರಬಹುದು ಎಂಬ ನಿರೀಕ್ಷೆ ನನ್ನದಾಗಿತ್ತು.
ತುಟಿಪಿಟ್ಟೆನ್ನದೆ ಕುಳಿತಿದ್ದ ಹೆಣ್ಣಿಗೆ ಅದೆಲ್ಲಿಯ ಉತ್ಸಾಹ ಬಂತೋ ಗೊತ್ತಿಲ್ಲ. ತನ್ನ ಇಂಗಿತ ವ್ಯಕ್ತಪಡಿಸಿ, ಗಂಡಿನ ಮೈಮರೆಸಿ ಕುಣಿಸುವ ಮನಸ್ಸಾಯಿತು ಬೀಸುವ ಗಾಳಿ ಲೆಕ್ಕಿಸದೆ ರೆಂಬೆಯಿಂದ ಗೂಡಿನತ್ತ ಹಾರಿತು.
ಆಗ ನಡೆದದ್ದೇ ಅನಾಹುತಕಾರಿ ಘಟನೆ..
ಗಾಳಿ ಬೀಸುತ್ತಿದ್ದುದರಿಂದ ಗೂಡು ಅತ್ತಿತ್ತ ಅಲುಗಾಡುತ್ತಿತ್ತು. ಅದರ ಬಾಗಿಲ ಕೆಳಗೆ ಕೆಲವು ನಾರು ಸಡಿಲವಾಗಿದ್ದವು. ಗಂಡು ಹೆಣ್ಣು ಜತೆಗೂಡಿದ ಬಳಿಕ ಗೂಡು ಆಖೈರುಗೊಳ್ಳುತ್ತದೆ. ಸಂಸಾರ ಮತ್ತೆ ಮುಂದುವರಿಯುತ್ತದೆ.
ಹಾರಿ ಬಂದು ಗೂಡಿನ ಬಾಗಿಲ ಬಳಿ ಇನ್ನೇನು ಕುಳಿತುಕೊಳ್ಳಬೇಕಾದ ಹೆಣ್ಣು ಆಯತಪ್ಪಿ ಜಾರಿತು. ಒಂದೆಡೆ ಗಾಳಿಯಿಂದ ಅಲುಗಾಡುತ್ತಿದ್ದ ಗೂಡು, ಮತ್ತೊಂದು ಕಡೆ ರೆಕ್ಕೆ ನಾರಿನ ಮಧ್ಯೆ ಸಿಲುಕಿ ಹೆಣ್ಣು ಒದ್ದಾಡತೊಡಗಿತು. ಹತ್ತಿರ ಬಂದು ಇನ್ನೇನು ತನ್ನ

ತೆಕ್ಕೆಯೊಳಗೆ ಬರಬೇಕಿದ್ದ ಹೆಣ್ಣು ಹೀಗೆ ಒದ್ದಾಟ ನಡೆಸುವಾಗ ಗಂಡು ದಿಕ್ಕೇ ತೋಚದಂತೆ ಗೂಡಿನ ಸುತ್ತ ಸುತ್ತತೊಡಗಿತು. ಮಾವಿನ ಹಣ್ಣು ನೇತಾಡಿದಂತೆ ಹೆಣ್ಣು ಕೆಲ ನಿಮಿಷ ಜೀವನ್ಮರಣ ಹೋರಾಟ ನಡೆಸಿತು. ಅಪಾಯ ತೀವ್ರಗೊಳ್ಳಲು ಇನ್ನೊಂದು ಕಾರಣವಿತ್ತು. ಸಮೀಪದ ಮರದಲ್ಲಿದ್ದ ಶಿಖರ ಹಕ್ಕಿ ಇದನ್ನು ಕ್ಷಣ ಮಾತ್ರದಲ್ಲಿ ಗಮನಿಸಿತ್ತು. ಹೀಗೆ ಸಿಗುವ ಹಕ್ಕಿ ಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಶಿಖರ ಬಯಸುವುದಿಲ್ಲ.
ನನಗೆ ಫೊಟೋ ಗ್ರಾಫರ್ ಆಗಿ ಸಂದಿಗ್ದ ಪರಿಸ್ಥಿತಿ. ಗೂಡಿನ ನಾರಿಗೆ ಸಿಲುಕಿದ ಹೆಣ್ಣು ಹಕ್ಕಿಯನ್ನು ಬಿಡಿಸಲು ಪ್ರಯತ್ನಿಸುವುದೋ, ಆ ಪ್ರಯತ್ನದಲ್ಲಿ ನಾನು ವಿಫಲನಾಗಿ ಕೆರೆಯೊಳಗೆ ಬಿದ್ದರೆ…ಎಂಬ ಪ್ರಶ್ನೆ ಎದುರಾಯಿತು. ಒಂದು ದೊಡ್ಡ ಕೋಲು ತಂದಿದ್ದರೆ ಬಿಡಿಸಬಹುದಿತ್ತೋ ಏನೋ. ಈ ಮಧ್ಯೆ, ಹದ್ದು ಒಂದು ಗೂಡಿನ ಸಮೀಪ ಹಾರಿ ಹೋಗಿದ್ದೂ ಕಾಣಿಸಿತು. ಹತ್ತು ನಿಮಿಷಗಳ ಕಾಲ ಗಾಳಿ ನಿಲ್ಲಲೇ ಇಲ್ಲ. ಹೆಣ್ಣಿನ ಚೀರಾಟ, ಗಂಡಿನ ತಳಮಳ,ತೊಳಲಾಟ ನೋಡಿದ ನನ್ನ ಮನಸ್ಸೂ ಕರಗಿತು. ಕ್ಯಾಮೆರಾ ಹಿಡಿದು ಕುಳಿತಿದ್ದ ನಾನು ಗದ್ಗದಿತನಾದೆ. ಕಣ್ಣೆದುರೇ ಒಂದು ಹಕ್ಕಿ ಸಾವು ಬದುಕಿನ ಹೋರಾಟದಲ್ಲಿ ಇದ್ದರೆ ನಾನು ಏನೂ ಮಾಡಲಾಗದೆ ಕುಳಿತೆನಲ್ಲ ಎಂದು ಬೇಸರವಾಯಿತು. ಆದರೆ ನನ್ನ ಸುಪ್ತ ಪ್ರಜ್ಞೆ ಜಾಗೃತವಾಗಿ, ಅದು ಪ್ರಕೃತಿ. ಹಸ್ತಕ್ಷೇಪ ಸಲ್ಲದು ಎಂಬ ನಿರ್ಧಾರಕ್ಕೆ ಬಂದೆ. ಆ ಕ್ಷಣವು

ಕ್ಯಾಮೆರಾದಲ್ಲಿ ದಾಖಲೆಯಾಗಬೇಕು ಎಂದು ಕೆಲವು ಕ್ಲಿಕ್ ಮಾಡಿದೆ. ಮತ್ತೆ ಮೌನವಾಗಿ ನೋಡುತ್ತ ಕುಳಿತೆ. ಜೋಕಾಲಿಯಂತೆ ಹಿಂದೆ ಮುಂದೆ, ಮಾವಿನ ಹಣ್ಣಿನಂತೆ ಅತ್ತಿತ್ತ ಅಲುಗಾಡುವ ಗೂಡು , ಹಕ್ಕಿ ಸಮೇತ ಕೆರೆ ನೀರಿಗೆ ಬೀಳುವುದು ಖಚಿತವಾಗಿತ್ತು. ಆ ಕಠೋರ ದೃಶ್ಯವನ್ನೂ ನೋಡುವ ಸ್ಥಿತಿ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ.
ಪಕ್ಷಿಯ ಸಾವು ನನ್ನೆದುರು ಘಟಿಸಬಾರದು, ಮಿಲನ ಮತ್ತು ಸಂಸಾರಕ್ಕೆ ಹಾತೊರೆಯುತ್ತಿದ್ದ ಪಕ್ಷಿಗಳಿಗೆ ತೊಂದರೆಯಾಗಬಾರದು ಎಂದು ಪ್ರಕೃತಿಯೇ ನಿರ್ಧಾರ ಕೈಗೊಂಡಿತೋ ಏನೋ. ಗಾಳಿ ಹೆಚ್ಚಾಗತೊಡಗಿತು. ಹೆಣ್ಣು ವಿಲವಿಲನೆ ಒದ್ದಾಡುತ್ತಿತ್ತು. ಒಂದು ಕ್ಷಣ ಗಾಳಿಯ ರಭಸಕ್ಕೆ ರೆಕ್ಕೆಗೆ ಸಿಲುಕಿದ್ದ ನಾರು ಜಾರಿತು. ಹೆಣ್ಣು ಥಟ್ಟನೆ ಬಲೆಯಿಂದ ತಪ್ಪಿಸಿಕೊಂಡಂತೆ, ಬದುಕುವ ಛಲದಿಂದ ಹಾರಿ, ಪಕ್ಕದ ರೆಂಬೆಯಲ್ಲಿ ಕುಳಿತಿತು. ಅದರ ಮುಖದಲ್ಲಿ ತೀವ್ರ ಬಳಲಿಕೆ ಎದ್ದು ಕಂಡಿತು. ಹೆಣ್ಣು ಜೀವ ಉಳಿಯಿತಲ್ಲ ಎಂದು ಖುಷಿಗೊಂಡಿದ್ದ ಗಂಡು ಅತ್ತಿತ್ತ ನೋಡುತ್ತ ಹುಡುಕತೊಡಗಿತು. ಹೆಣ್ಣು ಕಾಣಿಸದೆ ಚಡಪಡಿಸಿತು. ಹೆಣ್ಣು ಮಾತ್ರ ರೆಂಬೆಯಿಂದ ಮತ್ತೆ ಹಾರಿ ಹೆಣ್ಣು ಕಣ್ಮರೆಯಾಯಿತು. ಅಂದು ಇಡೀ ದಿನ ಗೀಜಗ ಫೊಟೋ ಗ್ರಫಿಯಲ್ಲಿ ಇದ್ದ ನನಗೆ, ಆ ಗೂಡಿನ ಬಳಿ

ಹೆಣ್ಣಿನ ಆಗಮನ ಕಂಡೇ ಇಲ್ಲ.
ಇಲ್ಲಿರುವುದು ಕೇವಲ ಗೂಡು ಅಲ್ಲ, ಹೆಣ್ಣಿಗಾಗಿ ಕಾದು ಕುಳಿತ ಗಂಡು ಜೀವ ಎನ್ನುತ್ತ ಗಂಡು ಗೀಜಗ ದಿನವಿಡೀ ಕಾಲ ಕಳೆಯಿತೇ?
ಗಾಳಿ, ಮಳೆ, ಚಳಿ, ಉರಿವ ಸೂರ್ಯನನ್ನೂ ಲೆಕ್ಕಿಸದೆ ಕಟ್ಡಿದ ಗೂಡಿಗೆ ಮರಳಿ ಬಾ…, ಬಹು ದೂರ ಹಾರಿದ್ದರೆ ಬಳಲಿಕೆಯಾದೀತು, ಬೇಗ ಬಾ…., ನಾಳೆ ಹಿತವಾದ ತಂಗಾಳಿ ಬೀಸೀತು, ಗೂಡು ಸೇರಿ ಸಂಸಾರ ಹೂಡೋಣ ಎನ್ನುತ್ತಿರಬಹುದೇ ಎಂದು ಆ ರಾತ್ರಿಯಿಡೀ ನನಗೆ ಯೋಚನೆಗೆ ಹತ್ತಿತ್ತು.
(ಲೇಖಕರು ಹಿರಿಯ ಪತ್ರಕರ್ತರು, ಪರಿಸರ, ವನ್ಯ ಜೀವಿ ಛಾಯಾಚಿತ್ರಗಾರರು. ನಾಡಿನ ಪ್ರಮುಖ ಕನ್ನಡ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು.)
