*ಗಂಗಾಧರ ಕಲ್ಲಪಳ್ಳಿ
ಸುಳ್ಯ:ಸುಳ್ಯ ನಗರದಲ್ಲಿ ಸಂಗ್ರಹಿಸಲಾಗುವ ಕಸವನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿಲೇವಾರಿ ಮಾಡಲು ಕಲ್ಚರ್ಪೆಯಲ್ಲಿ ಬರ್ನಿಂಗ್ ಮೆಷಿನ್ ಅಳವಡಿಸಲಾಗಿದೆ. ನಗರ ಪಂಚಾಯತ್ ನ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣುವ ನಿರೀಕ್ಷೆ ಇದೆ. ನಗರ ಪಂಚಾಯತ್ ನ ಕಸ ವಿಲೇವಾರಿ ಘಟಕ ಕಲ್ಚರ್ಪೆಯಲ್ಲಿ ಅಳವಡಿಸಲಾಗಿರುವ ಬರ್ನಿಂಗ್ ಮೆಷಿನ್ ಪ್ರಾಯೋಗಿಕವಾಗಿ ಚಾಲನೆ ಮಾಡಲಾಗಿದ್ದು ಮೊದಲ ಪ್ರಯೋಗ ಯಶಸ್ವಿಯಾಗಿದೆ. ಗ್ಯಾಸಿಫಿಕೇಶನ್ ಯಂತ್ರದ ಮೂಲಕ ಕಸವನ್ನು ಉರಿಸಲಾಗುತ್ತದೆ.ಪರಿಸರ ಸ್ನೇಹಿಯಾದ ಈ ಯಂತ್ರದಲ್ಲಿ ಕಸವನ್ನು ವಿಲೇವಾರಿ ಮಾಡಿದಾಗ ಗ್ಯಾಸ್ ಮತ್ತು ಬೂದಿ
ದೊರೆಯಲಿದ್ದು ಇದನ್ನು ಮರು ಬಳಕೆ ಮಾಡಬಹುದು.
ಸುಳ್ಯ ನಗರದಲ್ಲಿ ಪ್ರತಿ ದಿನ ಸಂಗ್ರಹವಾಗುವ ಕಸ ಮತ್ತು ಈಗಾಗಲೇ ಕಲ್ಚರ್ಪೆ ಹಾಗು ನಗರ ಪಂಚಾಯತ್ ಮುಂಭಾಗದಲ್ಲಿ ಶೇಖರಿಸಲಾಗಿರುವ ಕಸವನ್ನು ಯಂತ್ರದ ಮೂಲಕ ವಿಲೇವಾರಿ ಮಾಡಲಾಗುವುದು.ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಅಳವಡಿಸಲಾದ ಬರ್ನಿಂಗ್ ಯಂತ್ರದಲ್ಲಿ ಒಂದು ಗಂಟೆಯಲ್ಲಿ 150 ಕೆಜಿ ತ್ಯಾಜ್ಯವನ್ನು ಉರಿಸಬಹುದು. ದಿನ ನಿತ್ಯ ಸುಳ್ಯ ನಗರದಲ್ಲಿ ಒಂದು ಟನ್ ಗಿಂತಲೂ ಹೆಚ್ಚು ಕಸ ಸಂಗ್ರಹ ಆಗುತ್ತದೆ. ಸುಮಾರು ಎಂಟು ಗಂಟೆಗಳಲ್ಲಿ ಇಷ್ಟು ಕಸ ಉರಿಸಲು ಸಾಧ್ಯ. ಉರಿದಾಗ ನೀರು ಮಿಶ್ರಿತ ಬೂದಿ ಮತ್ತು ಗ್ಯಾಸ್ ದೊರೆಯುತ್ತದೆ.150 ಕೆಜಿ ಕಸದಿಂದ 8ರಿಂದ 10 ಕೆಜಿ ಬೂದಿ ಉತ್ಪತ್ತಿ ಆಗುತ್ತದೆ. ಗ್ಯಾಸನ್ನು ಸಂಗ್ರಹಿಸಿ ಗ ಬಳಕೆ ಮಾಡಬಹುದು. ಅದೇ ರೀತಿ ಬೂದಿಯನ್ನು ಬೇರ್ಪಡಿಸಿ ಇಟ್ಡಿಗೆ ನಿರ್ಮಾಣ ಮತ್ತಿತರ ಅಗತ್ಯಗಳಿಗೆ ಬಳಸಬಹುದು ಎನ್ನುತ್ತಾರೆ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ. ಸುಮಾರು 2500 ಟನ್ ಗೂ ಮಿಕ್ಕಿ ಕಸ ಈಗಾಲೇ ಕಲ್ಚರ್ಪೆಯಲ್ಲಿ ರಾಶಿ ಬಿದ್ದಿದೆ. ಅದನ್ನು ಈ ಗ್ಯಾಸ್ ಬಳಸಿ ಬೆಂಕಿ ಹಾಕಿ ಒಣಗಿಸಿ ಮೆಷಿನ್ ಮೂಲಕ ಬರ್ನ್ ಮಾಡಿ ವಿಲೇವಾರಿ
ಮಾಡಲಾಗುವುದು. ನೂರಾರು ಟನ್ ಕಸ ನಗರ ಪಂಚಾಯತ್ ಬಳಿಯ ಕಟ್ಟಡದಲ್ಲಿಯೂ ಇದೆ. ಇಲ್ಲಿ ದೊರೆಯುವ ಗ್ಯಾಸ್ ಮತ್ತು ಬೂದಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಯೋಜನೆ ಇದೆ ಎಂದು ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಇದೀಗ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಪೂರ್ಣ ಪ್ರಮಾಣದಲ್ಲಿ ಯಂತ್ರ ಸಜ್ಜುಗೊಳ್ಳಲು ಇನ್ನೂ ಕೆಲವೊಂದು ಯಂತ್ರಗಳು, ಮೋಟಾರ್ ಗಳನ್ನು ಅಳವಡಿಸಿಬೇಕಾಗಿದೆ.ಅದನ್ನು ಅಳವಡಿಸಿ ಇನ್ನೊಂದು ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸಿ ಅಕ್ಟೋಬರ್ 10ರ ಮೊದಲು ಉದ್ಘಾಟನೆ ಮಾಡುವ ಯೋಚನೆ ಇದೆ ಎಂದು ವಿನಯಕುಮಾರ್ ತಿಳಿಸಿದ್ದಾರೆ.
ಕಸದ ಸಮಸ್ಯೆ ಏನು:
ಸುಳ್ಯ ನಗರವನ್ನು ಕಳೆದ ಕೆಲವು ದಶಕಗಳಿಂದ ಕಾಡುವ ದೊಡ್ಡ ಸಮಸ್ಯೆ ಕಸ ವಿಲೇವಾರಿ. ಕಸ ಸಂಗ್ರಹಕ್ಕೆ ಮತ್ತು ವಿಲೆವಾರಿಗೆಂದು ಲಕ್ಷಾಂತರ ರೂಗಳನ್ನು ವ್ಯಯಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕದ ಸ್ಥಳಕ್ಕೆ ದೊಡ್ಡ ಹೋರಾಟವೇ ನಡೆಸಬೇಕಾಯಿತು. ಕಲ್ಚರ್ಪೆಯಲ್ಲಿ ತ್ಯಾಜ್ಯ ಘಟಕಕ್ಕೆ ಸ್ಥಳ ದೊರೆತರೂ ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದ ಕಾರಣ ಕಸ ತುಂಬಿ ತುಳುಕಿತ್ತು.ಬೇರೆ ಹಲವು ಕಡೆಗಳಲ್ಲಿ ಜಾಗ ಹುಡುಕಿದರೂ ವಿರೋಧಗಳು ಮತ್ತು ತಾಂತ್ರಿಕ ಅಡಚಣೆಗಳಿಂದ ಸೂಕ್ತ ಜಾಗ ಸಿಕ್ಕಿರಲಿಲ್ಲ.ಕಲ್ಚರ್ಪೆಯಲ್ಲಿ ಕಸ ಹಾಕಲು ಆಗದ ಕಾರಣ ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕಳೆದ ಮೂರು ವರ್ಷಗಳಿಂದ ನಗರ ಪಂಚಾಯತ್ ಮುಂಭಾಗದ
ಕಟ್ಟಡದಲ್ಲಿಯೇ ತುಂಬಿಡಲಾಗುತ್ತದೆ.ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಬೇಡಿಕೆ ಇತ್ತು.ನಗರ ಪಂಚಾಯತ್ ನ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಬರ್ನಿಂಗ್ ಮೆಷಿನ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲು ಆರಂಭಿಸಿದರೆ.ಸುಳ್ಯದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಒಮ್ಮೆ ಸಂಗ್ರವಾದ ಕಸಕ್ಕೆ ಮುಕ್ತಿ ನೀಡಿದ ಬಳಿಕ ಮುಂದೆ ಕಸವನ್ನು ಬೇರ್ಪಡಿಸಿ ಮರು ಬಳಕೆ ಆಗುವ ಕಸವನ್ನು ಕಾರ್ಖಾನೆಗಳಿಗೆ ಕಳಿಸುವ ಯೋಜನೆ ಇದೆ. ಈಗಾಗಲೇ ಪ್ಲಾಸ್ಟಿಕ್ ಮತ್ತಿತರ ಮರು
ಬಳಕೆ ಮಾಡಬಹುದಾದ ಕಸದ ಕೆಲವು ಲೋಡ್ ಗಳನ್ನು ಕಳಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.
‘ಅತ್ಯಾಧುನಿಕ ತಂತ್ರಜ್ಞಾನ ಉಪಯೋಗಿಸಿ ಬರ್ನಿಂಗ್ ಮೆಷಿನ್ ಅಳವಡಿಕೆ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿದೆ.ಬರ್ನಿಂಗ್ ಮೆಷಿನ್ ಅಳವಡಿಕೆ ಆದ ಮೇಲೆ ಸುಳ್ಯದ ಕಸ ವಿಲೇವಾರಿ ಸಮಸ್ಯೆ ಶಾಶ್ವತವಾಗಿ ಪರಿಹಾರ ಕಾಣಲಿದೆ. ಈ ಪರಿಸರ ಸ್ನೇಹಿ ಯೋಜನೆಯಿಂದ ಪರಿಸರಕ್ಕೆ ಮತ್ತು ಕಲ್ಚರ್ಪೆ ಪ್ರದೇಶದ ಜನರಿಗೆ ಆಗುತ್ತಿದ್ದ ತೊಂದರೆಗೂ ಮುಕ್ತಿ ಸಿಗಲಿದೆ.ಮುಂದಿನ ಹತ್ತು ದಿನದಲ್ಲಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಲಿದೆ
–ವಿನಯಕುಮಾರ್ ಕಂದಡ್ಕ
ಅಧ್ಯಕ್ಷರು. ನಗರ ಪಂಚಾಯತ್ ಸುಳ್ಯ.
ವಿನಯಕುಮಾರ್ ಕಂದಡ್ಕ