*ಎಂ.ನಾ.ಚಂಬಲ್ತಿಮಾರ್
ತೆಂಕುತಿಟ್ಟು ಯಕ್ಷಗಾನದ ಸ್ಟಾರ್ ಪದವಿಯ ಗಜಮೇಳ ‘ಹನುಮಗಿರಿ ‘ ಕೊರೋನೋತ್ತರ ಯಕ್ಷಪಯಣಕ್ಕೆ ಆದರ್ಶಯುತ ಹೆಜ್ಜೆ ಎತ್ತಿದೆ.. ಗೆಜ್ಜೆನಾದ ಮೊಳಗಿಸಿದೆ!
ಹೌದು ಮೊನ್ನೆ ಶ್ರೀಮದೆಡನೀರು ಮಠದಲ್ಲಿ ಶ್ರೀ ಶ್ರೀ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರ ಚಾತುರ್ಮಾಸ ದ ಮಂಗಲೋತ್ಸವದ ಮುನ್ನಾದಿನ (ದಿನಾಂಕ 19)ದಂದು ಪರಮಗುರು ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಚರಣಕ್ಕರ್ಪಿಸಿ ಹನುಮಗಿರಿ ಮೇಳ ತನ್ನ ನೂತನ ಪ್ರಸಂಗವನ್ನು ಪ್ರಸ್ತುತಿಯ ಮೂಲಕ ಅನಾವರಣಗೊಳಿಸಿದೆ.
ಇದು ರಂಗಕ್ಕೆ ತರುವ ಪೂರ್ವದ ಪ್ರದರ್ಶನದ
ಮೊದಲ ಪ್ರಯೋಗ. ಮುಂದಿನ ಸಾಲಿನ ಮೇಳ ತಿರುಗಾಟದ ಮುಖ್ಯ ಪ್ರಸಂಗವೆಂದೇ ಘೋಷಿತವಾಗಿರುವ “ಆತ್ಮಾಂಜಲಿ” ಯಕ್ಷಗಾನದ ಸಿದ್ದ ಜಾಡಿನ ಪ್ರಸಂಗಗಳ ನಡುವೆ ಭಿನ್ನ

,ಆದರ್ಶಯುತ ಮೌಲ್ಯ ಸಾರುವ ಪ್ರಸಂಗ.
ಮೇಲ್ನೋಟಕ್ಕಿದು ಹಿಂದೆ ಸುರತ್ಕಲ್ ಮೇಳದಲ್ಲಿ ಮೆರೆದ “ನಾಟ್ಯರಾಣಿ ಶಾಂತಲೆ “ಎಂಬ ಅದೇ ಪ್ರಸಂಗದಂತೆ ಕಂಡರೂ ಇದನ್ನ ಪೌರಾಣಿಕ ಆಶಯದಂತೆ ಪರಿಷ್ಕರಿಸಿ ಹೊಸ ಒಳನೋಟದ ಆಯಾಮ ನೀಡಲಾಗಿದೆ.ರಂಗಾವಿಷ್ಕಾರ ಗಳಿಂದ ಪರಿಷ್ಕರಿಸಲಾಗಿದೆ. ಎಂ. ಕೆ. ರಮೇಶಾಚಾರ್ ಮತ್ತು ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಸಂಯೋಜನೆಯಲ್ಲಿ ರಚಿಸಲ್ಪಟ್ಟ ಈ ಕಥಾನಕ ಮೊದಲ ಪ್ರಯೋಗದಲ್ಲಿ ಪ್ರೇಕ್ಷಕ ಮನಗೆದ್ದಿದೆ.,ನೋಟಕರ ಎದೆ ತಟ್ಟಿದೆ..! ಭರತಮುನಿಯ ನಾಟ್ಯಶಾಸ್ತ್ರದ ಉದ್ದೇಶ ಲಕ್ಷ್ಯ ಏನು? ಅದರ ಪ್ರಯೋಗದ ಪರಿಣಾಮ ಏನೇನು ಎಂದು ದೇವ ದಾನವರು ಬ್ರಹ್ಮನ ಅಧ್ಯಕ್ಷತೆಯಲ್ಲಿ ಸಂವಾದಿಸಿ ಪ್ರದರ್ಶನ ನೀಡುವಲ್ಲಿಂದ ಆರಂಭಗೊಳ್ಳುವ ಕತೆ ಬಳಿಕ ಭೂಲೋಕದ ಹೊಯ್ಸಳ ಸಾಮ್ರಾಜ್ಯವೆಂಬ ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀ ಮಂತಿಕೆಯ ವೈಭವದ ಕತೆಯನ್ನು ಬಣ್ಣಿಸುತ್ತದೆ. ಹೌದು…ಇದು ಕನ್ನಡ ನಾಡಿನ

ಕಲೆ, ಸಂಸ್ಕೃತಿ, ರಾಜಧರ್ಮ, ನೈತಿಕ ಮೌಲ್ಯವನ್ನೊಳಗೊಂಡ, ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಹೊಯ್ಸಳ ಸಾಮ್ರಾಜ್ಯದ ಅನಭಿಷಕ್ತ ಧರ್ಮಿಷ್ಠ ದೊರೆ ವಿಷ್ಣುವರ್ಧನ ಮತ್ತವನ ಮೋಹದ ಪಟ್ಟದರಸಿ ಶಾಂತಲೆಯ ಜೀವನವನ್ನು ಪ್ರತಿಪಾದಿಸುವ ಐತಿಹಾಸಿಕ ಕತೆ.
ಐತಿಹಾಸಿಕ ಕತೆಗೆ ಪೌರಾಣಿಕತೆಯ ಲೇಪನದಲ್ಲಿ ಪೌರಾಣಿಕವಾಗಿಯೇ ಪ್ರಸಂಗಪ್ರಸ್ತುತಿ ಮಾಡುವ ವಿಧಾನ ಇಲ್ಲಿದೆ… ಮೊದಲ ಪ್ರಯೋಗ ಎಂಬ ನಿಟ್ಟಿನಲ್ಲಿ ಸಮಗ್ರ ಪ್ರಸ್ತುತಿಯ ಕಾರಣದಿಂದ ಪ್ರದರ್ಶನಾವಧಿ ಲಂಘಿಸಿದೆ. ಆದರೆ ಮುಂದೆ ಕತ್ತರಿ ಪ್ರಯೋಗದ ಎಡಿಟಿಂಗ್ ನಡೆದು ಪ್ರದರ್ಶನಾವಧಿ ಆರು ತಾಸಿನೊಳಕ್ಕೆ ನಿಯಂತ್ರಣಗೊಂಡಾಗ ಪ್ರಸಂಗದ ಬಿಗಿ ಮತ್ತು ರಂಗದ ಕಾವು ಏರಬಹುದು.
ಆರಂಭದಿಂದಲೇ ವೀರಾವೇಶದ ಜೋಶ್ ನಲ್ಲಿ ಆರಂಭಗೊಳ್ಳುವ ಪ್ರಸಂಗ ಬಳಿಕ ಕಲೆ, ಸಾಹಿತ್ಯ, ಸಂಸ್ಕೃತಿ ಬಣ್ಣನೆಯ ಮೌಲ್ಯಯುತ ಶೃಂಗಾರದೊಂದಿಗೆ ಕುತೂಹಲ ಮೂಡಿಸುತ್ತಾ ಕತೆಯನ್ನು ಕೌತುಕದಿಂದ ಚಿಗುರಿಸುತ್ತದೆ.
ಕೊನೆಗೆ ಮೌಲ್ಯಾದರ್ಶದ ಜೀವನದ ಧ್ಯೇಯದೊಂದಿಗೆ ಕರುಣರಸದ ರಸಾರ್ದ್ರತೆಯಲ್ಲಿ ಕಣ್ಮನ ತೋಯಿಸುತ್ತಾ ಪ್ರೇಕ್ಷಕರನ್ನು ತನ್ಮಯಗೊಳಿಸಿ ಮಂತ್ರಮುಗ್ಧತೆಯಿಂದ

ಪ್ರಸಂಗದಲ್ಲಿ ತಲ್ಲೀನಗೊಳಿಸುತ್ತದೆ. ಇದು ಮಾಮೂಲಿ ಜಾಡಿಗಿಂತ ಭಿನ್ನ ನಡೆ… ಮೊದಲ ಪ್ರಯೋಗವೇ ಹತ್ತಾರು ಪ್ರದರ್ಶನ ಕಂಡ ಪ್ರದರ್ಶನದಂತೆ ಭಾಸವಾಗಿದೆ. ಒಂದು ಅನನ್ಯ ದೃಶ್ಯಕಾವ್ಯ ಆಗಿ ಮೂಡಿದೆ. ಇದು ಕೊರೋನೋತ್ತರ ಕಾಲದ ಪಯಣಕ್ಕೆ ಹನುಮಗಿರಿ ಮೇಳ ಎತ್ತಿದ ದಿಗ್ವಿಜಯದ ಹೆಜ್ಜೆ.
ಈ ಪ್ರಸಂಗದ ಹೆಸರೇ “ಆತ್ಮಾಂಜಲಿ “
ಇದು ವೀರ ವಿಷ್ಣುವರ್ಧನ -ಶಾಂತಲೆಯರ ಕತೆಯಷ್ಟೇ ಅಲ್ಲ…!! ಅಂಜಲಿ ಎಂದರೆ ಬೊಗಸೆ. ಅದೊಂದು ಮುದ್ರೆ.
ಜೋಡಿಸಲ್ಪಟ್ಟ ಕರಗಳ ಸಮರ್ಪಣೆಯ ಸಂಕೇತ.
ಸಮರ್ಪಿಸಬೇಕಾದುದನ್ನು ನೀಡುವಾಗ ಶುದ್ಧಾಂತಕರಣದಿಂದ ಅಂಜಲೀಬದ್ಧವಾಗಿ ಕೈಯ್ಯಲ್ಲಿ ಹಿಡಿಯುವುದು ಸತ್ಸಂಪ್ರದಾಯ. ಹೀಗಾಗಿ ಈ ಪ್ರಸಂಗ ಆತ್ಮ ಸಮರ್ಪಣೆಯ ತ್ಯಾಗದ ಚರಿತೆ ಸಾರುತ್ತದೆ. ಇದರಲ್ಲಿ ಕನ್ನಡ ನಾಡಿನ ಗತೇತಿಹಾಸದ ಮೌಲ್ಯದ ಸಂದೇಶವಿದೆ. ಭಾಷೆ, ಸಂಸ್ಕೃತಿ, ಕಲೆಯ ಹಿನ್ನಲೆಯನ್ನರಿಯದೇ ಅವಜ್ಞೆಗೊಳಗಾಗುವ ಹೊಸ ತಲೆಮಾರಿಗೆ ಅರಿವಿನ ಭೋಧನೆ ಇದೆ. ಈ ಎಲ್ಲಾ ಸದಾಶಯಗಳನ್ನು ಒಂದು ರಂಗಪ್ರಸ್ತುತಿಯಾಗಿಸಿರುವುದೇ ಹನುಮಗಿರಿ ಮೇಳದ ಈ

ಸಾಲಿನ ಪ್ರಸಂಗ ವೈಶಿಷ್ಟ್ಯ.
ಆದ್ದರಿಂದಲೇ ಇದು ಭಿನ್ನ ನಡೆಯ ಗೆಜ್ಜೆನಾದ….
ಕಳೆದ ಒಂದೂವರೆ ದಶಕದ ಅವಧಿಯಲ್ಲಿ ತೆಂಕುತಿಟ್ಟು ಯಕ್ಷಗಾನದ ದಿಶಾಪ್ರಜ್ಞೆಯಿಂದ ಹೊಸಹೊಸ ಪೌರಾಣಿಕ ಪ್ರಸಂಗಗಳನ್ನು ನೀಡುತ್ತಲೇ ಅತ್ಯಪಾರ ಪ್ರೇಕ್ಷಕರನ್ನು ಆಕರ್ಷಿಸಿದ ಹನುಮಗಿರಿ ಮೇಳ ತೆಂಕುತಿಟ್ಟಿನ ಪ್ರಸಂಗಗಳ ಏಕತಾನತೆ ನೀಗಿಸಿದೆ. ಕಾಲದಿಂದ ಕಾಲಕ್ಕೆ ಕಲೆಯ ಕೈ ದಾಟಿಸುವಿಕೆಗೆ ಸಮಕಾಲೀನ ಪ್ರಜ್ಞೆ ಯಿಂದ ಪ್ರವರ್ತಿಸಿದೆ.
ಅದಕ್ಕೆ ಕಳೆದ 15ವರ್ಷಗಳಲ್ಲಿ ಅದು ನೀಡುತ್ತಲೇ ಬಂದ ಪ್ರಸಂಗಗಳೇ ನಿದರ್ಶನ.
ಈ ಬಾರಿ ಈ ನಿಟ್ಟಿನಲ್ಲಿ ಇನ್ನೂ ಒಂದಡಿ ಮುಂದಿಟ್ಟು ಮೌಲ್ಯಾದರ್ಶದ ಪ್ರಸಂಗದಿಂದ ಹೊಸ ಪೀಳಿಗೆಯ ಪ್ರೇಕ್ಷಕರಿಗೆ ಕನ್ನಡ ನಾಡಿನ ವೀರಪರಂಪರೆಯ ಕಥನ ಹೇಳಲು ಹೊರಟಿದೆ. ಇದು ಶ್ಲಾಘನೀಯ ಹೆಜ್ಜೆ… ಕೇವಲ ಅಗ್ಗದ ರಂಜನೆಯನ್ನಷ್ಟೇ ನೀಡುವುದು ಕಲೆಯ ಕಸುಬಲ್ಲ. ಪ್ರೇಕ್ಷಕರಿಗೆ ನಾಡಚರಿತೆಯನ್ನುಣಿಸಿ ಆತ್ಮಾಭಿಮಾನದ ಸ್ಫೂರ್ತಿ ನೀಡುವುದೂ ಕಲೆಯ ಕೆಲಸ.
ಕಲೆ ಎಂದರೇನೆಂದರಿಯಲು ಪ್ರೇರೇಪಿಸುವುದೂ ಕಲೆಯ ಬದ್ದತೆ.

ಅರಿವುಳ್ಳ ಪ್ರೇಕ್ಷಕರನು ರೂಪಿಸುವುದೂ ಕಲಾಬದ್ದತೆ. ಇದೆಲ್ಲವೂ ಅಡಕವಾದ “ಆತ್ಮಾಃಜಲಿ “ಕಲಾವಿದರ ಸಾಂಘಿಕ ಪ್ರಯತ್ನದಿಂದ ಗೆದ್ದಿದೆ… ತಲೆದೂಗಿಸುವ ಸುಂದರ ಪದ್ಯಗಳು, ಪ್ರತಿಭಾವಂತ ಭಾಗವತರು, ಸಮರ್ಥ ಹಿಮ್ಮೇಳ, ಅರ್ಥವತ್ತಾದ ವಾಚಿಕತೆಯಿಂದ ಇದೊಂದು ದೃಶ್ಯಕಾವ್ಯ ದ ರಸಗವಳ ಎನಿಸಿದೆ.
ಕೊರೋನೋತ್ತರದ ಕವಲೊಡೆಯುವ ಕಾಲಕ್ಕೆ ಕಲೆಯಲ್ಲಿ ಇಂಥ ಪ್ರಯೋಗಗಳೇ ಮೇಳವನ್ನು ಎತ್ತರಿಸಬೇಕಷ್ಟೇ..
ಇದನ್ನು ಮನಗಂಡು ಕಾಲಕ್ಕೆ ಮೊದಲೇ ಕಾಲೆತ್ತಿ ಸಜ್ಜಾದ ಹನುಮಗಿರಿ ಮೇಳದ ಟೀಂ ವರ್ಕ್ ಗೆ ಪ್ರೀತಿಯ ಅಭಿನಂದನೆ ಹೇಳದಿರಲಾರೆ…
ಈ ಪ್ರಸಂಗ ನೀವೊಮ್ಮೆ ನೋಡಿ, ಆಸ್ವಾದಿಸಿ..
ಆಗ ಅರಿವಾದೀತು,
ಹಳೇ ನೆನಪುಗಳೂ ಮೂಡೀತು..
(ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು. ‘ಕಣಿಪುರ’ಯಕ್ಷಗಾನ ಪತ್ರಿಕೆಯ ಸಂಪಾದಕರು.)
