ಬೆಳ್ಳಾರೆ: ಹಿರಿಯ ಯಕ್ಷಗಾನ ಪ್ರಸಂಗಕರ್ತೃ, ಅರ್ಥಧಾರಿ , ಚುಟುಕು ಸಾಹಿತಿ ಕೆ.ಸೂರ್ಯನಾರಾಯಣ ಭಟ್ ಅವರನ್ನು ಭಾನುವಾರ ಬೆಳ್ಳಾರೆ ಜೇಸೀ ವತಿಯಿಂದ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಹಲವು ವರ್ಷಗಳ

ಕಾಲ ಬೆಳ್ಳಾರೆಯಲ್ಲೇ ವಾಸವಿದ್ದು, ಈಗ ಬೆಳ್ತಂಗಡಿಯ ಮಚ್ಚಿನದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಕೆ.ಸೂರ್ಯನಾರಾಯಣ ಭಟ್ ಅವರ ನಿವಾಸದಲ್ಲೇ ಈ ಪುರಸ್ಕಾರ ನೀಡಲಾಯಿತು. ಪುರಸ್ಕಾರ ಶಾಲು, ಫಲಕ ಮತ್ತು 27 ಸಾವಿರ ನಗದು ಒಳಗೊಂಡಿದೆ. ಬೆಳ್ಳಾರೆ ಜೇಸೀ ಅಧ್ಯಕ್ಷ ಪದ್ಮನಾಭ ನೆಟ್ಟಾರು, ಕಾರ್ಯದರ್ಶಿ ಜಗದೀಶ ರೈ ಪೆರುವಾಜೆ, ಪೂರ್ವಾಧ್ಯಕ್ಷರಾದ ರಾಮಕೃಷ್ಣ ಭಟ್ ಚೂಂತಾರು, ಪ್ರದೀಪ ಕುಮಾರ ರೈ ಪನ್ನೆ, ಪ್ರೀತಂ ರೈ ಪೆರುವಾಜೆ, ಜಯರಾಮ ಉಮಿಕ್ಕಳ, ವೀರನಾಥ್, ಲಿಂಗಪ್ಪ ಬೆಳ್ಳಾರೆ ಮತ್ತು ಕಲಾವಿದರಾದ ವಳಕುಂಜ ರವಿಶಂಕರ್, ರಾಮ ಜೋಯಿಸ ಈ ಸಂದರ್ಭ ಹಾಜರಿದ್ದರು. 84 ವರ್ಷ ವಯಸ್ಸಿನ

ಸೂರ್ಯನಾರಾಯಣ ಭಟ್ ಅವರು 25 ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಸುಗ್ರೀವ ಸಖ್ಯ, ವಾಲಿ ಮೋಕ್ಷ, ರಾಮಪಟ್ಟಾಭಿಷೇಕ, ಶಿವಲೀಲೆ, ಭಕ್ತಸುಧನ್ವ, ಗೌತಮಬುದ್ಧ , ಕಣಪಡಿತ್ತಾಯ ಚರಿತ್ರೆ ಮೊದಲಾದವು ಪ್ರಮುಖ ಪ್ರಸಂಗಗಳು. ಕುಟುಂಬ ಯೋಜನೆಯ ಅಗತ್ಯ ಸಾರುವ ಜನಕಲ್ಯಾಣ ಮಿತಸಂತಾನ ಪ್ರಸಂಗವನ್ನೂ ಬರೆದಿದ್ದಾರೆ. ತಾಳಮದ್ದಲೆ ಅರ್ಥಧಾರಿಯಾಗಿದ್ದ ಅವರು ಶೇಣಿ ಗೋಪಾಲಕೃಷ್ಣ ಭಟ್, ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ ಮೊದಲಾದ ದಿಗ್ಗಜರೊಡನೆ ಅರ್ಥ ಹೇಳಿದ್ದಾರೆ. ಚುಟುಕು ಸಾಹಿತಿಯೂ ಆಗಿರುವ ಸೂರ್ಯನಾರಾಯಣ ಭಟ್ ಅವರು ಕನ್ನಡ, ತುಳು, ಹವ್ಯಕ, ಮಲಯಾಳ, ತೆಲುಗು ಭಾಷೆಯಲ್ಲಿ ಜಲಜಸಖ ಕಾವ್ಯನಾಮದಲ್ಲಿ ಚುಟುಕುಗಳನ್ನು ರಚಿಸಿದ್ದಾರೆ. ಭಜನೆ, ಸುಪ್ರಭಾತ, ದೇವರ ಸ್ತೋತ್ರ,ಶ್ಲೋಕ ಮತ್ತು ನಾಟಕಗಳನ್ನೂ ರಚಿಸಿದ್ದಾರೆ. ಬೆಳ್ಳಾರೆ ಹಲವು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮಗಳನ್ನು ಏರ್ಪಡಿಸಿ, ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
Advertisement