ಸುಳ್ಯ:ಕಳೆದ ಒಂದು ದಶಕಗಳಿಂದಲೂ ಹೆಚ್ಚು ಸಮಯದಿಂದ ಸುಳ್ಯ ತಾಲೂಕಿನ ಅರಣ್ಯದಂಚಿನ ಗ್ರಾಮಗಳು ಆನೆ ದಾಳಿಯಿಂದ ನಲುಗಿ ಹೋಗಿದೆ. ಗಜೆಪಡೆಗಳ ದಾಳಿಗೆ ಸಿಲುಕಿ ಕೃಷಿಕರು ಬೆವರು ಸುರಿಸಿ ಬೆಳೆಸಿದ ಕೃಷಿ ನಾಶವಾಗಿದೆ. ಕೋಟಿಗಳ ನಷ್ಟಗಳೇ ಉಂಟಾಗಿದೆ. ಈಗಲೂ ನಿರಂತರ ಕೃಷಿ ನಾಶ ಆಗುತಿದೆ. ಮಂಡೆಕೋಲು, ಆಲೆಟ್ಟಿ, ಸಂಪಾಜೆ, ಮರ್ಕಂಜ ಹೀಗೆ ಹಲವು ಗ್ರಾಮಗಳಲ್ಲಿ ಆನೆ ದಾಳಿ ನಿರಂತರ ಸಮಸ್ಯೆ.ಅರಣ್ಯದಂಚಿನ ಗ್ರಾಮಗಳ ಜನರ ಕೃಷಿ ಪ್ರದೇಶಗಳನ್ನು ಕಾಡಾನೆ ಹಾವಳಿಯಿಂದ ರಕ್ಷಿಸಲು, ಆನೆಗಳು ಕಾಡಿನಿಂದ ನಾಡಿಗೆ ಬರುವುದು ತಡೆಯಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ.ಆನೆ ಕಂದಕ, ಸೋಲಾರ್ ಬೇಲಿ ಹೀಗೆ ಕೆಲವೊಂದು ಯೋಜನೆ ಜಾರಿ ಮಾಡಿದರೂ ಆನೆ ಹಾವಳಿ ತಡೆಯುವಲ್ಲಿ ಪೂರ್ತಿ ಯಶ ಕಂಡಿಲ್ಲ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಜಾರಿ ಮಾಡಿರುವ ವಿಶೇಷ ಯೋಜನೆ ಕಾಂಕ್ರೀಟ್ ತಡೆ ಬೇಲಿ ನಿರ್ಮಾಣ. ಆನೆಗಳು ನಾಡಿಗೆ ಬರುವ
ದಾರಿಯನ್ನು ಗುರುತಿಸಿ ಅಲ್ಲಿ ಕಾಂಕ್ರೀಟ್ ಬೇಲಿ ನಿರ್ಮಿಸುವುದು ಯೋಜನೆ. ಅಲ್ಲಲ್ಲಿ ಕಂದಕಗಳನ್ನು ನಿರ್ಮಿಸಿದರೂ, ನದಿ, ತೋಡುಗಳ ಬದಿ, ಗುಡ್ಡಗಳ ಇಳಿಜಾರು, ಕಣಿವೆ ಮತ್ತಿತರ ಪ್ರದೇಶಗಳ ಮೂಲಕ ಆನೆಗಳು ನಾಡಿಗೆ ನುಗ್ಗುತ್ತವೆ. ಇಂತಹಾ ಪ್ತದೇಶದಲ್ಲಿ ಕಾಂಕ್ರೀಟ್ ತಡೆಬೇಲಿ ನಿರ್ಮಿಸಲು ಮುಂದಾಗಿದೆ. ಈ ವರ್ಷ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ 40 ಮೀಟರ್ ಮತ್ತು ಮಂಡೆಕೋಲು ಗ್ರಾಮದಲ್ಲಿ 40 ಮೀಟರ್ ಒಟ್ಟು 80 ಮೀಟರ್ ಉದ್ದದ ಕಾಂಕ್ರೀಟ್ ತಡೆ ಬೇಲಿ ನಿರ್ಮಿಸಲಾಗಿದೆ. ಸುಮಾರು 15 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗಿದೆ. ಸಂಪಾಜೆ ಗ್ರಾಮದ ಗೂನಡ್ಕ ಬಳಿ ಕೆ.ಪಿ. ಜಗದೀಶ್ ಅವರ ತೋಟದ ಸಮೀಪ 40 ಮೀಟರ್ ಮತ್ತು ಮಂಡೆಕೋಲು ಗ್ರಾಮದ ಪುಂಡರೀಕ ಗೌಡ ಎಂಬವರ ತೋಟದ ಬದಿಯಲ್ಲಿ 40 ಮೀಟರ್ ಉದ್ದದ ಕಾಂಕ್ರೀಟ್ ಬೇಲಿ ನಿರ್ಮಿಸಲಾಗಿದೆ.ಕಳೆದ ವರ್ಷವೂ ಸಂಪಾಜೆಯಲ್ಲಿ 40 ಮೀಟರ್ ಕಾಂಕ್ರೀಟ್ ತಡೆ ಬೇಲಿ ನಿರ್ಮಾಣ ಮಾಡಲಾಗಿತ್ತು. ಕಾಂಕ್ರೀಟ್
ಸ್ಲಾಬ್ ಗಳನ್ನು ತಯಾರಿಸಿ, ಸುಮಾರು 1 ಮೀ ಅಂತರದಲ್ಲಿ 2 ಮೀ ಎತ್ತರಕ್ಕೆ ಕಂಬ ಹಾಕಲಾಗುತ್ತದೆ . ನಂತರ ಅವುಗಳಿಗೆ ಕಾಂಕ್ರೀಟ್ ಸ್ಲಾಬ್ ಅಳವಡಿಸಿ ಬೇಲಿ ನಿರ್ಮಿಸಲಾಗುತ್ತದೆ. ಮತ್ತೆ ಕಬ್ಬಿಣದ ಮುಳ್ಳುಗಳನ್ನು ಜೋಡಿಸಲಾಗುತ್ತದೆ.ಕಂಬಗಳ ನಡುವೆ ಅವಕಾಶ ಕಿರಿದಾಗಿರುವುದರಿಂದ ಆನೆಗಳಿಗೆ ಇದನ್ನು ದಾಟಿ ಒಳ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ದಾಟಲು ಪ್ರಯತ್ನಪಟ್ಟರೂ ಮುಳ್ಳು ಚುಚ್ಚುವ ಕಾರಣ ಆನೆಗಳು ಹಿಂಜರಿಯುತ್ತವೆ.ಸುಳ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಈ ರೀತಿಯ ವಿಶೇಷ ತಡೆ ಯೋಜನೆಯಲ್ಲಿ ಸುಮಾರು ಒಂದು ಸಾವಿರ ಮೀಟರ್ ಉದ್ದದ ಕಾಂಕ್ರೀಟ್ ತಡೆ ಬೇಲಿ ಅಗತ್ಯವಿದೆ. ಅನುದಾನದ ಲಭ್ಯತೆಯ ಪ್ರಕಾರ ಇದನ್ನು ಪೂರ್ತಿ ಮಾಡಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.
30 ಕಿಮಿ ಆನೆ ಕಂದಕ:
ಆನೆ ಹಾವಳಿ ತಡೆಯಬೇಕು ಎಂಬ ನಿರಂತರ ಬೇಡಿಕೆಯ ಹಿನ್ನಲೆಯಲ್ಲಿ ಆನೆ ಹಾವಳಿ ಅಧಿಕ ಇರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕಳೆದ 5-6 ವರ್ಷಗಳಿಂದ ಅರಣ್ಯದಂಚಿನಲ್ಲಿ ಆನೆ ಕಂದಕಗಳನ್ನು ನಿರ್ಮಿಸಿದೆ. ಸುಳ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಮಂಡೆಕೋಲು, ಆಲೆಟ್ಟಿ, ಸಂಪಾಜೆ, ಮರ್ಕಂಜ ಮತ್ತಿತರ ಪ್ರದೇಶಗಳಲ್ಲಿ 30 ಕಿ.ಮಿ ಗಿಂತಳು ಅಧಿಕ ಆನೆ ಕಂದಕ ನಿರ್ಮಾಣ ಮಾಡಲಾಗಿದೆ. ಮಂಡೆಕೋಲಿನಲ್ಲಿ ಕಳೆದ ಒಂದು
ವರ್ಷದಲ್ಲಿ1600 ಮೀಟರ್ ಕಂದಕ ನಿರ್ಮಿಸಲಾಗಿದೆ.ಕಂದಕ ನಿರ್ಮಿಸಲು ಸಾಧ್ಯವಾಗದ ಕಡೆ ಕೆಲವೆಡೆ ಗ್ಯಾಪ್ ಉಳಿಯುತ್ತದೆ. ಈ ಗ್ಯಾಪ್ ಮೂಲಕ ಆನೆಗಳು ನುಗ್ಗಿ ಬರುತ್ತದೆ. ಇಂತಹಾ ಪ್ರದೇಶಗಳಲ್ಲಿ ವಿಶೇಷ ತಡೆಯಾಗಿ ಕಾಂಕ್ರೀಟ್ ತಡೆ ಬೇಲಿ ನಿರ್ಮುಸಲು ಯೋಜನೆ ರೂಪಿಸಲಾಗಿದೆ.
ಗಡಿಗಳಲ್ಲಿ ಆನೆಗಳ ಮ್ಯಾರಥಾನ್:
ಕಾಡಾನೆ ದಾಳಿಗೆ ಅತೀ ಹೆಚ್ಚು ನಲುಗಿರುವುದು ಗಡಿ ಗ್ರಾಮಗಳು. ಕೊಡಗು ಗಡಿಯ ಸಂಪಾಜೆ, ಕೇರಳ ಗಡಿಯಲ್ಲಿರುವ ಮಂಡೆಕೊಲು, ಆಲೆಟ್ಟಿ ಗ್ರಾಮಗಳಲ್ಲಿ ಆನೆ ಹಾವಳಿ ದೊಡ್ಡ ಸಮಸ್ಯೆ. ಆನೆಗಳನ್ನು ಮಂಡೆಕೋಲು ಭಾಗದಿಂದ ಅಟ್ಟಿದರೆ ಆನೆಗಳು ಕೇರಳದ ಗ್ರಾಮಗಳಿಗೆ ಹೋಗಿ ಅಲ್ಲಿ ಬೀಡು ಬಿಟ್ಟು ದಾಳಿ ಮಾಡುತ್ತವೆ. ಅಲ್ಲಿಂದ ಅಟ್ಟಿದರೆ ಈ
ಕಡೆ ಬರುತ್ತವೆ. ಹೀಗೆ ಗಡಿಯಲ್ಲಿ ಆನೆಗಳದ್ದು ಮುಗಿಯದ ಮ್ಯಾರಥಾನ್ ಓಟ. ಅರಣ್ಯದ ಗಡಿಗಳಲ್ಲಿ ಎರಡೂ ರಾಜ್ಯಗಳು ಆನೆ ಕಂದಕ, ಕಲ್ಲಿನ ಗೋಡೆ, ಸೋಲಾರ್ ಬೇಲಿ ನಿರ್ಮಾಣ ಮಾಡಿದರೂ ಆನೆ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ.
“ಕಾಡಾನೆ ದಾಳಿ ತಡೆಗಟ್ಟಲು ಅರಣ್ಯ ಇಲಾಖೆ ನಿರಂತರ ಯೋಜನೆಗಳನ್ನು ರೂಪಿಸಿದೆ. ಆನೆ ಕಂದಕಗಳನ್ನು ನಿರ್ಮಿಸಿದಾಗ ಮಧ್ಯದಲ್ಲಿ ಬರುವ ಕೆಲವು ಗ್ಯಾಪ್ ಗಳು ಉಳಿಯುತ್ತದೆ.ಅದರ ಮೂಲಕ ಆನೆಗಳು ಬರುತ್ತವೆ. ಅದಕ್ಕಾಗಿ ಅಂತಹಾ ಪ್ರದೇಶಗಳನ್ನು ಗುರುತಿಸಿ ವಿಶೇಷ ತಡೆಯಾಗಿ ಕಾಂಕ್ರೀಟ್ ಬೇಲಿ ನಿರ್ಮಿಸಲಾಗುತ್ತದೆ. ಈ ರೀತಿ ಸುಮಾರು ಒಂದು ಸಾವಿರ ಮೀಟರ್ ಗೂ ಅಧಿಕ ಉದ್ದದ ಬೇಲಿ ನಿರ್ಮಾಣ ಮಾಡಬೇಕಾಗಿದೆ.ಅನುದಾನದ ಲಭ್ಯತೆ ಆಧಾರದಲ್ಲಿ ಇದನ್ನು ಪೂರ್ತಿ ಮಾಡಲಾಗುವುದು. ಆನೆ ಹಾವಳಿ ತಡೆಗೆ ಆನೆ ಕಂದಕ ಮತ್ತಿತರ ಯೋಜನೆಗಳನ್ನೂ ಅನುಷ್ಠಾನ ಮಾಡಲಾಗುತಿದೆ. ಆನೆ ಹಾವಳಿಯಿಂದ ಕೃಷಿ ನಾಶವಾದ ಕೃಷಿಕರಿಗೆ ಸರಕಾರ ಪರಿಹಾರವನ್ನೂ ನೀಡಲಾಗುತ್ತದೆ. ಸುಳ್ಯದಲ್ಲಿ ಕಳೆದ ವರ್ಷ 10 ಲಕ್ಷ, ಈ ವರ್ಷ 4.5 ಪರಿಹಾರ ನೀಡಲಾಗಿದೆ.ಆನ್ ಲೈನ್ ಮೂಲಕವೇ ನೇರವಾಗಿ ಪರಿಹಾರ ನೀಡಲಾಗುತ್ತದೆ”
ಗಿರೀಶ್.ಆರ್.
ವಲಯ ಅರಣ್ಯ ಅಧಿಕಾರಿ , ಸುಳ್ಯ ವಲಯ
ಗಿರೀಶ್. ಆರ್.