ಮುಕ್ಕೂರು : ಕುಂಡಡ್ಕ-ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ನೇಸರ ಯುವಕ ಮಂಡಲ ಆಶ್ರಯದಲ್ಲಿ ಅ.2 ರಂದು ಮುಕ್ಕೂರು ಬಸ್ ಪ್ರಯಾಣಿಕರ ತಂಗುದಾಣ ಹಾಗೂ ಮುಕ್ಕೂರು ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ನಡೆಯಿತು.
ಸಮಿತಿ ಗೌರವಾಧ್ಯಕ್ಷ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಕೊಡುಗೆ ನೀಡಿದ ಮಹಾತ್ಮ ಗಾಂಧೀಜಿ ಹಾಗೂ ಜೈ ಜವಾನ್-ಜೈ ಕಿಸಾನ್ ಘೋಷಣೆಯ ಹರಿಕಾರ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಕೊಡುಗೆ, ಆದರ್ಶ, ಚಿಂತನೆಗಳು ನಮಗೆ ಪ್ರೇರಕ ಶಕ್ತಿಯಾಗಬೇಕು.
ಸಹೋದರತೆ, ಸಾಮರಸ್ಯದ ಸಮಾಜದ ಕಟ್ಟುವ ಮೂಲಕ ಮಹಾತ್ಮರ ಆಶಯಗಳನ್ನು ಅನುಷ್ಠಾನಿಸುವ ಕಾರ್ಯ ನಡೆಯಬೇಕು ಎಂದರು.
ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಆದ್ಯತೆ : ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾದರಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಗ್ರಾ.ಪಂ. ಮೂಲಕ ಯೋಜನೆ ರೂಪಿಸಲಾಗಿದೆ. ಮುಕ್ಕೂರು ವಾರ್ಡ್ ನಲ್ಲಿ ಎರಡು ಸಾರ್ವಜನಿಕ ಶೌಚಾಲಯ ನಿರ್ಮಿಸಿ ಸಂಘ ಸಂಸ್ಥೆಗಳ ಮೂಲಕ ಅದರ ನಿರ್ವಹಣೆಗೆ ಜವಬ್ದಾರಿ ನೀಡಲಾಗುವುದು. ಗಾಂಧೀ ಜಯಂತಿಯನ್ನು ದೇಶವು ಸ್ವಚ್ಛತಾ ದಿನವನ್ನಾಗಿ ಆಚರಿಸುತ್ತಿದ್ದು ಅದಕ್ಕೆ ಪೂರಕವಾಗಿ ಸ್ವಚ್ಛ ಪರಿಸರ ನಿರ್ಮಾಣ ಕಾರ್ಯ ಅನುಷ್ಠಾನಿಸಲಾಗುವುದು ಎಂದು ಅವರು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕುರಿತು ಸಂಸ್ಮರಣಾ ನುಡಿಗಳನ್ನಾಡಿದ ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್., ಈ ದೇಶದ ಏಳಿಗೆಗಾಗಿ ಇಬ್ಬರು ಮಹಾಪುರುಷರ ಕೊಡುಗೆ ಅಪಾರವಾದದು. ಗಾಂಧಿ ಮಾರ್ಗ ಮತ್ತು ಶಾಸ್ತ್ರಿ ಚಿಂತನೆಗಳು ಇಂದಿನ ಅಗತ್ಯತೆಯು ಆಗಿದೆ. ನಿತ್ಯವು ಅವರನ್ನು ಸ್ಮರಿಸುವ ಮೂಲಕ ಅವರ ಆದರ್ಶಗಳ ಪಾಲನೆ ಮಾಡಬೇಕು ಎಂದರು.
ಸ್ವಚ್ಛ ಪರಿಸರ ನಿರ್ಮಾಣದಲ್ಲಿ ಪ್ರತಿ ವ್ಯಕ್ತಿ, ಮನೆಯ ಪಾತ್ರ ಹಿರಿದಾದದು. ಈ ಜಾಗೃತಿ ಮನೆಯಿಂದಲೇ ಆರಂಭವಾದರೆ ಆಗ ಸ್ವಚ್ಛ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಹೀಗಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಯಂತ್ರಣ, ಎಲ್ಲೆಂದರಲ್ಲಿ ಕಸ ಬಿಸಾಡುವ ಪ್ರವೃತ್ತಿಯನ್ನು ಬಿಟ್ಟು ಸ್ವಚ್ಛತೆಯ ಬಗ್ಗೆ ಸ್ವಯಂಪ್ರೇರಿತರಾಗಿ ಜಾಗೃತರಾಗಬೇಕು ಎಂದರು.
ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಘ ಸಂಸ್ಥೆ, ಹಳೆ ವಿದ್ಯಾರ್ಥಿಗಳು, ದಾನಿಗಳ ಸಹಕಾರದ ಅಗತ್ಯವಿದೆ. ಶಾಲೆಯ ಮೂಲಕ ಮಕ್ಕಳ ವ್ಯಕ್ತಿತ್ವ ಅರಳಿ ಅವರು ಮಹಾಪುರುಷರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಕುಂಡಡ್ಕ-ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಸದಸ್ಯರಾದ ವೆಂಕಟರಮಣ, ಮಹೇಶ್ ಕುಂಡಡ್ಕ, ಪ್ರವೀಣ್ ಬೋಳಕುಮೇರು, ಕೃಷ್ಣಪ್ಪ ಕುಂಡಡ್ಕ, ರವಿ ಕುಂಡಡ್ಕ ಮೊದಲಾದವರಿದ್ದರು. ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಶಾಕಾರಿ ಜೀವನ್ ಕೊಂಡೆಪ್ಪಾಡಿ ನಿರೂಪಿಸಿದರು.
ಒಂದು ತಾಸು ಶ್ರಮದಾನ
ಮುಕ್ಕೂರು ಬಸ್ ಪ್ರಯಾಣಿಕರ ತಂಗುದಾಣ ಹಾಗೂ ಮುಕ್ಕೂರು ಶಾಲಾ ವಠಾರದಲ್ಲಿ ಬೆಳಗ್ಗೆ 7.30 ರಿಂದ 8.30 ರ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕುಂಡಡ್ಕ-ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ನೇಸರ ಯುವಕ ಮಂಡಲದ ಸದಸ್ಯರು ಪಾಲ್ಗೊಂಡಿದ್ದರು.