*ಡಾ.ರಮಾನಂದ ಬನಾರಿ
ಬರಸಿಡಿಲು ಬಡಿದಂತೆ ಬಿರುಗಾಳಿ ಹೊಡೆದಂತೆ ಎಂಬ ಕವಿಯ ಉದ್ಗಾರವನ್ನು ನೆನಪಿಸುವ ಹಾಗೆ ಯಕ್ಷಗಾನ ಲೋಕಕ್ಕೆ ದೊಡ್ಡ ಆಘಾತವಾಗಿ ಬಂದೊದಗಿದ ಪದ್ಯಾಣ ಗಣಪತಿ ಭಟ್ಟ ಅವರ ಅನಿರೀಕ್ಷಿತ ನಿಧನದ ವಾರ್ತೆ ತೀವ್ರವಾದ ವಿಷಾದವನ್ನುಂಟುಮಾಡಿದೆ. ಒಬ್ಬ ಭಾಗವತರಾಗಿ ಅಪೂರ್ವವಾದ ಯಶಸ್ಸನ್ನು ಸಾಧಿಸಿದ ಪದ್ಯಾಣ ಗಣಪತಿಯವರು ಪದ್ಯಾಣ ಪರಂಪರೆಯನ್ನೇ ಬೆಳಗಿಸಿದವರು.ಯಕ್ಷಗಾನದ ಭಾಗವತರ ಸಾಲಿನಲ್ಲಿ ಯಾವ ಮಾನದಿಂದ ಅಳೆದರೂ ಸರ್ವಶ್ರೇಷ್ಠರ ಯಾದಿಯಲ್ಲಿ ಪದ್ಯಾಣರಿಗೊಂದು ಸ್ಥಾನ ಇದ್ದೇ ಇದೆ. ಅವರ ರಾಗ ಮಾಧುರ್ಯ, ಸ್ವರ ಮಾಧುರ್ಯ, ತರಂಗ ತರಂಗಗಳಾಗಿ ಶ್ರೋತೃಗಳನ್ನು ಮಾತ್ರವೇ ಅಲ್ಲ ಮುಮ್ಮೇಳದವರನ್ನು ಕೂಡಾ ಬಡಿದೆಬ್ಬಿಸಬಲ್ಲ ಅವರ ಭಾಗವತಿಕೆಯ ಅಸಾಧಾರಣ ಸೌಂದರ್ಯವನ್ನು ಎಸ್.ಪಿ. ಬಾಲಸುಬ್ರಹ್ಮಣ್ಯರಂತಹ ಹಿರಿಯ ಗಾಯಕರೇ ‘ಎದೆತುಂಬಿ’ ಹಾಡಿ ಹೊಗಳಿದ್ದರಲ್ಲಿ ಏನೇನೂ ಉತ್ಪ್ರೇಕ್ಷೆಯಿಲ್ಲ. ಅರ್ಥಗಾರಿಕೆಯ ಶಕಪುರುಷ ಶೇಣಿಯವರಂಥವರೇ ಅತ್ಯಂತ ಉತ್ಸಾಹದಿಂದ ಪದ್ಯಾಣದವರ

ಗಾನ ವೈಭವವನ್ನು ಆಸ್ವಾದಿಸಿ ಅರ್ಥ ಹೇಳುವುದನ್ನು ನಾನು ಎಷ್ಟೋ ಬಾರಿ ಕಂಡಿದ್ದೇನೆ. ವೈಯಕ್ತಿಕವಾಗಿ ನಾನೂ ಅವರ ಭಾಗವತಿಕೆಯ ಸುಖವನ್ನು ಆಸ್ವಾದಿಸಿದ್ದು ಮಾತ್ರವಲ್ಲ ವೇದಿಕೆಯಲ್ಲಿ ಅನುಭವಿಸಿದ್ದೇನೆ. ಶ್ರೀಮಠದಲ್ಲಿ ಪರಮಪೂಜ್ಯ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರಗಿದ ಅನೇಕ ತಾಳಮದ್ದಳೆಗಳಲ್ಲಿ ನಾನು ಪದ್ಯಾಣದವರ ಸಹಕಲಾವಿದನಾಗಿ ಭಾಗವಹಿಸಿದ್ದೇನೆ. ಕೆಲವೇ ವರ್ಷಗಳ ಹಿಂದೆ ಚೊಕ್ಕಾಡಿ ಸಮೀಪ ಉಡುವೆಕೋಡಿಯವರು ರಾವಣನ ಪಾತ್ರ ವಹಿಸಿದ ‘ವಿಭೀಷಣ ನೀತಿ’ ತಾಳಮದ್ದಳೆಯಲ್ಲಿ ಪದ್ಯಾಣದವರು ಭಾಗವತಿಕೆಯನ್ನು ನಿರ್ವಹಿಸಿದ ರೀತಿ ಮತ್ತು ಪಾತ್ರಧಾರಿಗಳಿಗೆ ನೀಡಿದ ಸ್ಫೂರ್ತಿ ವಿಭೀಷಣನ ಪಾತ್ರವನ್ನು ವಹಿಸಿದ್ದ ನನ್ನ ಹೃದಯದಲ್ಲಿ ಹಸಿರಾಗಿಯೇ ಉಳಿದಿದೆ. ‘ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು’ ಎಂಬ ಗೋವಿಂದ ಪೈಯವರ ಸಾಲುಗಳನ್ನು ಯಕ್ಷಲೋಕದ ಹೃದಯರಂಗದಲ್ಲಿ
ಪ್ರತಿಧ್ವನಿಸಿದ ಪದ್ಯಾಣ ಗಣಪತಿ ಭಟ್ಟ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಕ್ಕೂ ಅಪಾರ ಸಂಖ್ಯೆಯ ಅಭಿಮಾನಿಗಳಿಗೂ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ಕೊಡಲಿ ಎಂದು ಹಾರ್ದಿಕವಾಗಿ ಪ್ರಾರ್ಥಿಸುತ್ತೇವೆ.
ಪದ್ಯಾಣ ಗಣಪತಿ ಭಟ್ಟ ಅವರ ಧ್ವನಿಸುರುಳಿಗಳನ್ನೆಲ್ಲ ಕಾಯ್ದಿರಿಸಿಕೊಂಡರೆ ಖಂಡಿತವಾಗಿಯೂ ಯಕ್ಷಲೋಕದ ಅನರ್ಘ್ಯ ಸಂಪತ್ತಾಗಿ ಉಳಿಯಬಲ್ಲುದು.
(ಡಾ.ರಮಾನಂದ ಬನಾರಿ ಮಂಜೇಶ್ವರ ಅವರು ದೇಲಂಪಾಡಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ
ಸಾಂಸ್ಕೃತಿಕ ಅಧ್ಯಯನ ಕೇಂದ್ರ
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ
ಕಲಾಸಂಘದ ಅಧ್ಯಕ್ಷರು.)