ಸುಳ್ಯ:ಜಿಲ್ಲೆಯ ವಿವಿಧ ಕಡೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಕ ಘಟಕದ ಉದ್ಘಾಟನೆಯಾಗಿದೆ. ಈ ಹಿನ್ನಲೆಯಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿಯೂ ಆಮ್ಲಜನಕ ಉತ್ಪಾದಿಸುವ ಘಟಕ ನಿರ್ಮಾಣ ಪ್ರಗತಿಯಲ್ಲಿದೆ. ಕುದ್ರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿಯ ಸಾಮಾಜಿಕ ಕ್ಷೇಮ ಸೇವಾ ನಿಧಿಯಿಂದ 20 ಲಕ್ಷ ರೂ ವೆಚ್ಚದಲ್ಲಿ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಮ್ಲಜನಕ ಉತ್ಪಾದಕ ಘಟಕವನ್ನು

ಕೊಡ ಮಾಡಿದೆ. ತಿಂಗಳ ಹಿಂದೆಯೇ ಆಮ್ಲಜನಕ ಉತ್ಪಾದಕ ಪ್ಲಾಂಟ್ ಸುಳ್ಯಕ್ಕೆ ಆಗಮಿಸಿದೆ. ಆದರೆ ಆಕ್ಸಿಜನ್ ಪ್ಲಾಂಟ್ ಗೆ ಬೇಕಾದ ಕಟ್ಟಡ ನಿರ್ಮಾಣ ಆಗದ ಕಾರಣ ಪ್ಲಾಂಟ್ ಕಾರ್ಯಾರಂಭ ಆಗಿಲ್ಲ. ಪ್ಲಾಂಟ್ ನ್ನು ಪ್ಲಾಸ್ಟಿಕ್ ಹೊದಿಕೆ ಹಾಕಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಇರಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿಭಾಗ ಪ್ಲಾಂಟ್ ಗೆ ಬೇಕಾದ ಕಟ್ಟಡ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ. ವಿದ್ಯುತ್ ಸಂಪರ್ಕ ಮತ್ತಿತರ ವ್ಯವಸ್ಥೆ ಮಾಡಲಿದೆ. ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಟ್ಟಡ

ಮತ್ತು ವಿದ್ಯುತ್ ಸಂಪರ್ಕ ಆದ ಕೂಡಲೇ ಪ್ಲಾಂಟ್ ಸ್ಥಾಪಿಸಿ ಆಮ್ಲಜನಕ ಉತ್ಪಾದನೆ ಆರಂಭಿಸಲಾಗುತ್ತದೆ ಎನ್ನುತ್ತಾರೆ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ಆಕ್ಸಿಜನ್ ಪ್ಲಾಂಟ್ ತಿಂಗಳ ಹಿಂದೆಯೇ ಬಂದಿರುವ ಕಾರಣ ಕೂಡಲೇ ಕಟ್ಟಡ ಮತ್ತಿತರ ವ್ಯವಸ್ಥೆ ಪೂರ್ತಿ ಮಾಡಿ ಆಮ್ಲಜನಕ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಬೇಕಾಗಿದೆ ಎಂದು ಡಾ.ಕರುಣಾಕರ ಹೇಳುತ್ತಾರೆ.