ದೀಪದಿಂದ ದೀಪವ..ಹಚ್ಚಬೇಕು ಮಾನವಾ.. ಪ್ರೀತಿಯಿಂದ ಪ್ರೀತಿ ಹಂಚಿರೋ.. ಎಂಬ ಹಾಡಿನ ಸಾಲಿನಂತೆ ದೀಪಗಳನ್ನು ಹಚ್ಚಿ ಪ್ರೀತಿ ಹಂಚುವ ಹಬ್ಬ ದೀಪಾವಳಿ. ದೀಪಾವಳಿ ಅಂದರೆ ದೀಪಗಳ ಹಬ್ಬ. ವೈವಿಧ್ಯಗಳ ಬೆಳಕಿನ ಹಬ್ಬ. ಈ ಜಗತ್ತಿನಲ್ಲಿ ಅಂಧಕಾರವನ್ನು ತೊಡೆದು ಹಾಕಿ ಬೆಳಕನ್ನು ಹರಿಸುವ, ಮಾನವನ ಬದುಕಿನಲ್ಲಿ ಮತ್ತು ಹೃದಯದಲ್ಲಿ ಇರುವ ಕತ್ತಲನ್ನು ದೂರ ಮಾಡಿ ಐಶ್ವರ್ಯ, ಪ್ರೀತಿ, ಸೌಹಾರ್ಧತೆಯ ಬೆಳಕನ್ನು ಹರಿಸುವ ದೀಪಾವಳಿ ನಾಡಿಗೇ ನಾಡೇ ಸಂಭ್ರಮಿಸುವ ಹಬ್ವ. ದೀಪಾವಳಿಯ ದೀಪ ಹಚ್ಚುವಿಕೆಗೂ ಅದರದ್ದೇ ಆದ ಮಹತ್ವ,
ವೈವಿಧ್ಯತೆಗಳಿವೆ. ದೀಪಾವಳಿ ಎಂದರೆ ಸಾಲು ಸಾಲು ದೀಪಗಳು ಮನಸಿಗೂ, ಬದುಕಿಗೂ ಆನಂದದ ದೀಪ ಪ್ರಭೆಯನ್ನು ಸುರಿಸತ್ತದೆ.ಈ ದೀಪಗಳಿಂದ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದವಾಗುತ್ತದೆ. ದೀಪಾವಳಿ ಅಂದ ಕೂಡಲೇ ನೆನಪಿಗೆ ಬರುವುದು ಹಣತೆಗಳ ಸಾಲು..ಸಾಲು. ಹಣತೆ ಹಚ್ಚಿ ಅಂಧಕಾರವನ್ನು ತೊರೆದು ಜ್ಯೋತಿ ಪ್ರಭೆಯನ್ನು ಹರಿಸುವುದೇ ದೀಪಾವಳಿಯ ಅಂದ ಮತ್ತು ಚಂದ.ಇಂದು ಹಲವು ವೈವಿಧ್ಯಮಯ ಹಣತೆಗಳು ದೊರಕುತ್ತವೆ. ವಿದ್ಯುತ್ದೀಪಗಳ ಮಾಲೆಗಳನ್ನು ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿಯಿರುತ್ತದೆ. ‘ದೀಪ’ ಎನ್ನುವ ಶಬ್ದದ ನಿಜವಾದ ಅರ್ಥವು ಎಣ್ಣೆ ಮತ್ತು ಬತ್ತಿಯ ಜ್ಯೋತಿ ಎಂದಾಗಿದೆ. ‘ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು’ ಎನ್ನುವುದು ಶ್ರುತಿಯ ಆಜ್ಞೆಯಾಗಿದೆ. ‘ತಮಸೋಮಾ ಜ್ಯೋತಿರ್ಗಮಯ |’ ದೀಪಾವಳಿಯ ದಿನಗಳಲ್ಲಿ ಮನೆಯಲ್ಲಿ ದೀಪಗಳನ್ನು ಹಚ್ಚಿದರೆ,ಅವರ ಮನೆಯಲ್ಲಿ ಯಾವಾಗಲೂ ಪ್ರಕಾಶ ಹರಿದು ಜ್ಞಾನದೆಡೆಗೆ ಹೋಗುತ್ತಾರೆ ಎಂಬುದು ನಂಬಿಕೆ ದೀಪದಾನದಿಂದ ಲಕ್ಷ್ಮೀಯು ಸ್ಥಿರವಾಗುತ್ತಾಳೆ. ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀಯ ವಾಸ ಮತ್ತು ಜ್ಞಾನದ ಪ್ರಕಾಶವಿರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಉತ್ಸವವನ್ನುಲ ಆಚರಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಸುಖಸಮೃದ್ಧಿ ಇರುತ್ತದೆ. ದೀಪಾಲಂಕಾರದಲ್ಲಿ ಹಲವಾರು ವಿಧಗಳಿವೆ. ಹಣತೆಗಳು ದೀಪಾವಳಿಯ ಪ್ರತೀಕವಾದರೆ ಆಕಾಶದೀಪ ದೀಪಾಲಂಕಾರದ ಇನ್ನೊಂದು ಭಾಗವಾಗಿದೆ. ಆಶ್ವಯುಜ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯ ವರೆಗೆ ಮನೆಯ ಹೊರಗೆ ಒಂದು ಎತ್ತರವಾದ ಕಂಬವನ್ನು
ನಿಲ್ಲಿಸಿ ಅದರ ಮೇಲೆ ಹಗ್ಗದ ಸಹಾಯದಿಂದ ತೂಗುಹಾಕುವ ದೀಪಕ್ಕೆ ‘ಆಕಾಶದೀಪ’ ಎನ್ನುತ್ತಾರೆ. ಮನೆಯ ಹತ್ತಿರದಲ್ಲಿಯೇ ಸ್ವಲ್ಪ ಜಾಗವನ್ನು ಗೋಮಯದಿಂದ ಸಾರಿಸಬೇಕು. ಅದರ ಮೇಲೆ ಚಂದನಯುಕ್ತ ಜಲವನ್ನು ಸಿಂಪಡಿಸಿ ಅಷ್ಟದಳ ಕಮಲವನ್ನು ಬಿಡಿಸಬೇಕು. ಅದರ ಮಧ್ಯಭಾಗದಲ್ಲಿ ಕಂಬವನ್ನು ನೆಡಬೇಕು. ಅದನ್ನು ವಸ್ತ್ರ, ಪತಾಕೆ, ಅಷ್ಟಘಂಟೆ ಮತ್ತು ಕಲಶ ಇವುಗಳಿಂದ ಅಲಂಕರಿಸಬೇಕು. ಅದರ ಮೇಲೆ ಅಷ್ಟದಳಾಕೃತಿ ಆಕಾಶದೀಪವನ್ನು ನೇತಾಡಿಸಬೇಕು. ಅದರಲ್ಲಿ ದೊಡ್ಡ ದೀಪವನ್ನು ಉರಿಸಿಡಬೇಕು. ಅದರ ಸುತ್ತಲೂ ಕಮಲದ ಪ್ರತಿಯೊಂದು ದಳದಲ್ಲಿ ಒಂದರಂತೆ ಎಂಟು ದೀಪಗಳನ್ನು ಧರ್ಮ, ಹರ, ಭೂತಿ, ದಾಮೋದರ, ಧರ್ಮರಾಜ, ಪ್ರಜಾಪತಿ, ಪಿತೃ ಮತ್ತು ಪ್ರೇತ ಇವರನ್ನುದ್ದೇಶಿಸಿ ಇಡಬೇಕು. ದೀಪಗಳಲ್ಲಿ ಎಳ್ಳೆಣ್ಣೆಯನ್ನು ಹಾಕಬೇಕು. ಅನಂತರ ಆಕಾಶದೀಪಕ್ಕೆ ಪೂಜೆ ಮಾಡಿ ಅದನ್ನು ಮುಂದಿನ ಮಂತ್ರೋಚ್ಚಾರದಿಂದ ಮೇಲಕ್ಕೇರಿಸಬೇಕು. ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ |ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ ||
ಅರ್ಥ : ಶ್ರೇಷ್ಠ ಪರಮೇಶ್ವರನಾದ ದಾಮೋದರನಿಗೆ ಈ ಜ್ಯೋತಿಸಹಿತ ಆಕಾಶದೀಪವನ್ನು ಅರ್ಪಿಸುತ್ತೇನೆ. ಆ ತೇಜಸ್ವೀ ಅನಂತನಿಗೆ ನಾನು
ನಮಸ್ಕರಿಸುತ್ತೇನೆ. ಇದರ ಫಲವು ಲಕ್ಷ್ಮೀಪ್ರಾಪ್ತಿಯಾಗಿದೆ.’
ದೀಪಾವಳಿಯಂದು ಆಕಾಶದೀಪವನ್ನು ತೂಗಾಡಿಸುವುದರಿಂದ ಮನ, ಮನೆಗಳಲ್ಲಿ ಕೆಟ್ಟ ಘಟಕಗಳ ಪ್ರಭಾವ, ಜಡತ್ವ ದೂರವಾಗುತ್ತದೆ ಎಂಬ ನಂಬಿಕೆ ಇದೆ. ದೀಪಾವಳಿಯ ಮುಂಚಿನ ದಿನದಿಂದಲೇ ಮನೆಯ ಹೊರಗೆ ಆಕಾಶದೀಪವನ್ನು
ಹಚ್ಚುತ್ತಾರೆ. ಆಕಾಶದೀಪದಲ್ಲಿ ತೇಜತತ್ತ್ವದ ಸಮಾವೇಶವಿರುವುದರಿಂದ ಊಧ್ರ್ವ ದಿಕ್ಕಿನಿಂದ ಕಾರ್ಯನಿರತ ವಾಗುವ ಆಪಮಯ ಲಹರಿಗಳು ಹತೋಟಿಗೆ ಬಂದು ತೇಜತತ್ತ್ವದ ಜಾಗೃತಿದರ್ಶಕ ಲಹರಿಗಳು ಮನೆಯಲ್ಲಿ ವರ್ತುಲಾತ್ಮಕವಾಗಿ ಸಂಚರಿಸುತ್ತವೆ; ಹಾಗಾಗಿ ಮನೆಯ ಹೊರಗೆ ಆಕಾಶದೀಪವನ್ನು ಹಾಕುತ್ತಾರೆ.
ದೀಪಾವಳಿಯ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಕೆಟ್ಟ ಘಟಕಗಳ ನಿರ್ಮೂಲನೆಗಾಗಿ ಶ್ರೀ ಲಕ್ಷಿ ತತ್ತ್ವ ಕಾರ್ಯನಿರತವಾಗಿರುತ್ತದೆ. ಈ ತತ್ತ್ವದ ಲಾಭ ಪಡೆಯಲು ಪಂಚತತ್ತ್ವದ ಎಲ್ಲ ಸ್ತರಗಳನ್ನು ಒಂದು ಕಡೆ ಮಾಡಿ
ಅದಕ್ಕೆ ವಾಯುತತ್ತ್ವದ ಗತಿಮಾನತೆಯ ಆಕರ್ಷಣೆಯಿಂದ ಆಕಾಶ ಟೊಳ್ಳಿನ ಸಂಚಾರದಿಂದ ಗ್ರಹಣ ಮಾಡಲಾಗುತ್ತದೆ. ಇದಕ್ಕಾಗಿ ಆಕಾಶದೀಪವನ್ನು ಮನೆಯ ಹೊರಗೆ ಎತ್ತರದ ಸ್ಥಳದಲ್ಲಿ ತೂಗುಹಾಕಲಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿ ಸಂಚಾರವಾಗುವ ತತ್ತ್ವದ ಲಾಭವಾಗುತ್ತದೆ ಎಂಬ ನಂಬಿಕೆ ಇದೆ. ದೀಪಾವಳಿ ಸಂದರ್ಭದಲ್ಲಿ ಹಲವು ವರ್ಣಮಯ, ವೈವಿಧ್ಯಮಯ ಆಕಾಶ ದೀಪಗಳು ಲಭ್ಯವಿರುತ್ತದೆ.