*ಗಂಗಾಧರ ಕಲ್ಲಪಳ್ಳಿ
ಸುಳ್ಯ:ತರಕಾರಿ ದರ ಗಗನ ಮುಖಿಯಾಗಿದ್ದರೆ ಕೆಲವು ದಿನಗಳ ಹಿಂದಿನವರೆಗೆ ಗಗನಕ್ಕೇರಿ ಕೈಯಿಂದ ಜಾರುತ್ತಿದ್ದ ಹಸಿ ಮೀನು ದರ ಈಗ ಕೆಳಕ್ಕೆ ಧುಮುಕಿದೆ. ಮಾರುಕಟ್ಟೆಯಲ್ಲಿ ತರಕಾರಿ ವಸ್ತುಗಳು ಕೈ ಸುಡುತ್ತಿದ್ದರೆ ಮೀನುಗಳು ಕೈಗೆ ಸಿಗುತ್ತಿದೆ. ಎಲ್ಲಾ ಆಹಾರ ವಸ್ತುಗಳ ಬೆಲೆಯೂ ಏರಿ ಫುಡ್ ದಿನೇ ದಿನೇ ಕಾಸ್ಟ್ ಲಿ ಆಗುವ ಸಂದರ್ಭದಲ್ಲಿ ಮೀನಿನ ದರ ಇಳಿಕೆ ಮೀನು ಖಾದ್ಯ ಪ್ರಿಯರಿಗೆ ಕೊಂಚ ಖುಷಿ ನೀಡಲಿದೆ.ಎಲ್ಲಾ ಮೀನುಗಳ ದರವೂ ಈಗ ಕೊಂಚ ಕಡಿಮೆಯಾಗಿದೆ. ಒಂದೆರಡು ತಿಂಗಳ ಹಿಂದೆ ಇದ್ದ ದರದ ಅರ್ಧದಷ್ಟು ಇಳಿಕೆಯಾಗಿದೆ. ಸಾಮಾನ್ಯವಾಗಿ ಜೂನ್ ತಿಂಗಳಿನಿಂದ
ಆಗಸ್ಟ್ ವರೆಗೆ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಇದರಿಂದ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲದಲ್ಲಿ ಸುಮಾರು 4 ತಿಂಗಳ ಕಾಲ ಮೀನು ಸರಬರಾಜು ಕಡಿಮೆ ಇರುತ್ತದೆ. ಆ ಸಂದರ್ಭದಲ್ಲಿ ತಮಿಳುನಾಡು, ಆಂಧ್ರ ಪ್ರದೇಶ ಮತ್ತಿತರ ಹೊರ ರಾಜ್ಯದ ಮೀನು ಅಥವಾ ಕೋಲ್ಡ್ ಸ್ಟೋರೇಜ್ ಮೀನುಗಳು ಇಲ್ಲಿಗೆ ಹೆಚ್ಚಾಗಿ ಬರುತ್ತದೆ. ಮೀನು ಸರಬರಾಜು ಕಡಿಮೆ ಇದ್ದ ಕಾರಣ ಈ ಅವಧಿಯಲ್ಲಿ ದರ ಅಧಿಕ ಇರುತ್ತದೆ. ಮಳೆಗಾಲ ಮುಗಿದು ಆಳ ಸಮುದ್ರ ಮೀನುಗಾರಿಕೆ ಆರಂಭವಾದ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಯಥೇಚ್ಛವಾಗಿ ಮೀನುಗಳು ಸರಬರಾಜಾಗುತ್ತದೆ.ಈ ಸಂದರ್ಭದಲ್ಲಿ ಮೀನು ದರ ಇಳಿಯುತ್ತದೆ ಎಂದು ಸುಳ್ಯದ ಮೀನು ವ್ಯಾಪಾರಿಗಳು ಹೇಳುತ್ತಾರೆ. ಸುಳ್ಯ ನಗರದಲ್ಲಿ ತಿಂಗಳ ಹಿಂದೆ ಕೆಜಿಗೆ 250 ರೂವರಗೆ ಇದ್ದ ಬೂತಾಯಿ ಮೀನಿನ ದರ ಈಗ
100ಕ್ಕೆ ಇಳಿದಿದೆ. ಕೆಜಿಗೆ 400 ರೂವರೆಗೆ ಏರಿದ್ದ ಬಂಗುಡೆ ದರ ಅರ್ಧಕ್ಕೆ ಇಳಿದಿದೆ. ದೊಡ್ಡ ಬಂಗುಡೆ ಈಗ ಕೆಜಿಗೆ 200 ಇದ್ದರೆ ಸಣ್ಣ ಬಂಗುಡೆ ದರ 140 ಇದೆ. ಕೆಜಿಯೊಂದಕ್ಕೆ 700-800 ರೂವರೆಗೆ ಏರಿ ‘ಚಿನ್ನದ ಮೀನಾಗಿದ್ದ’ ಅಂಜಲ್ ಮೀನು ದರ 400ರ ಆಸುಪಾಸಿಗೆ ಬಂದಿದೆ. 650 ರೂವರೆಗೆ ಮಾರಾಟವಾಗಿದ್ದ ಮಾಂಜಿ ಮೀನು ಈಗ 350-400ರ ರೇಂಜ್ ನಲ್ಲಿದೆ. 250 ಇದ್ದ ಡಿಸ್ಕೋ ದರ 150, ಮದ್ಮಾಲ್ 300ರ ರಿಂದ 200ಕ್ಕೆ ಇಳಿದಿದೆ. 350ರವರೆಗೆ ಏರಿದ್ದ ನಂಗ್ ಮೀನು ದರ 200ಕ್ಕೆ ಇಳಿದಿದೆ. ಮಾಸ್ ಮೀನು ದರ ಈಗ 150 ಇದೆ. ಕೆಲ ಸಮಯದ ಹಿಂದೆ 200ರ ಮೇಲೆ ಇತ್ತು. 250-300 ರ ಆಸುಪಾಸಿನಲ್ಲಿ ದಿನಾ ಮಾರಾಟ ಆಗುತ್ತಿದ್ದ ಮೀನು ಪ್ರಿಯರ ಇಷ್ಟ ಖಾದ್ಯಗಳಾದ ಅಡವು, ಕೊಡ್ಡಾಯಿ ಮತ್ತಿತರ ಮೀನುಗಳ ದರವೂ ಕೆಜಿಗೆ 150-200ರ ಆಸುಪಾಸಿನಲ್ಲಿದೆ. ಚಿಕ್ಕದಾದರೂ ತನ್ನ ವಿಶೇಷ ಸ್ವಾದದಿಂದ ಮನ ಗೆಲ್ಲುವ ಬೊಲಿಂಜರ್ ಮೀನು ದರ 250 ರಿಂದ 100 ಕ್ಕೆ ಇಳಿದಿದೆ.
ಸ್ಟಾಲ್ ಗಳ ಸಂಖ್ಯೆ ಇಳಿಕೆ- ಕಡಿಮೆಯಾದ ಸ್ಪರ್ಧೆ:
ಸುಳ್ಯ ನಗರ ಪಂಚಾಯತ್ ಕಚೇರಿ ಸಮೀಪದಲ್ಲೇ ಇರುವ ನಗರ ಪಂಚಾಯತ್ ಮೀನು ಮಾರುಕಟ್ಟೆಯಲ್ಲಿ ಈಗ ಮೀನು ಮಾರಾಟ ಸ್ಟಾಲ್
ಗಳ ಸಂಖ್ಯೆ ಇಳಿಕೆಯಾಗಿದೆ.ಜೊತೆಗೆ ಸ್ಪರ್ಧೆಯೂ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಇಲ್ಲಿನ ಮೀನು ಸ್ಟಾಲ್ ಗಳ ಸಂಖ್ಯೆ ಮತ್ತು ಮಾರುಕಟ್ಟೆ ಏಲಂ ಮೊತ್ತ ದಾಖಲೆ ನಿರ್ಮಿಸಿ ದೊಡ್ಡ ಸುದ್ದಿಯಾಗಿತ್ತು. ಮೀನು ಮಾರುಕಟ್ಟೆಯಲ್ಲಿ 8 ಸ್ಟಾಲ್ ಗಳನ್ನು ಹಾಕಲು ಅವಕಾಶ ಇದೆ. ಆದರೆ ಈಗ ನಾಲ್ಕು ಸ್ಟಾಲ್ ಗಳು ಮಾತ್ರ ಇದೆ. ಗಾಂಧಿನಗರದಲ್ಲಿ ಒಂದು ಸ್ಟಾಲ್ ಇದೆ. ಅಲ್ಲದೆ ನಗರ ಸಮೀಪದ ಜಾಲ್ಸೂರು, ಆಲೆಟ್ಟಿ ಗ್ರಾಮ ವ್ಯಾಪ್ತಿ ಸೇರಿ ವಿವಿಧ ಗ್ರಾಮಗಳಲ್ಲಿ ಮೀನು ಮಾರುಕಟ್ಟೆ ಇದೆ. ಇದರಿಂದ ನಗರದಲ್ಲಿ ಮೀನು ಸ್ಟಾಲ್ ಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಇದ್ದ ಸ್ಟಾಲ್ ಗಳಲ್ಲಿಯೂ ಈಗ ಮೊದಲಿನ ವ್ಯಾಪಾರ ಕಡಿಮೆ ಎನ್ನುತ್ತಾರೆ ಮೀನು ವ್ಯಾಪಾರಿಗಳು.