ಮಂಗಳೂರು: ಪ್ರತಿ ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ
ಕರಾವಳಿ ಕರ್ನಾಟಕ ಭಾಗದ ಮೀನುಗಾರರ ಸಮಸ್ಯೆಗಳು, ಕುಂದುಕೊರತೆಗಳನ್ನು ಅರಿತು ಅವುಗಳನ್ನು ಬಗೆ ಹರಿಸಲು ಯತ್ನಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಅವರು ತಿಳಿಸಿದರು.
ಅವರು ಜ.17ರಂದು ನಗರದ ಸ್ಟೇಟ್ ಬ್ಯಾಂಕ್ ಬಳಿ ತಮ್ಮ ಕಚೇರಿಯನ್ನು ಉದ್ಘಾಟಿಸಿ ನಂತರ

ಮಾಧ್ಯಮದವರೊಂದಿಗೆ ಮಾತನಾಡಿದರು.ತಲಪಾಡಿಯಿಂದ ಕಾರವಾರದವರೆಗಿನ ರಾಜ್ಯದ ಕರಾವಳಿಯ ಮೀನುಗಾರ ಬಂಧುಗಳ ಸಮಸ್ಯೆಗಳನ್ನು ನೂತನವಾಗಿ ಆರಂಭಿಸಲಾದ ಕಚೇರಿಯಲ್ಲಿ ಆಲಿಸಿ ಅವುಗಳಿಗೆ ಪರಿಹಾರ ಕಲ್ಪಿಸುವ ಯತ್ನ ಮಾಡಲಾಗುವುದು, ಅದರಂತೆ ಉಡುಪಿ ಹಾಗೂ ಕಾರವಾರ ಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಪರಿಹರಿಸಲಾಗುವುದು ಎಂದು ಮಾಹಿತಿ ನೀಡಿದರು. ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ 28 ಹಾಗೂ ಬಂದರು ಇಲಾಖೆಗೆ ಸಂಬಂಧಿಸಿದ 98 ಹೊಸ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತಿದೆ, ವಿಶೇಷವಾದ ಯೋಜನೆಗಳಿಂದ ಕರಾವಳಿ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿಗೆ ಬದ್ಧವಾಗಿವೆ, ಸಾರ್ವಜನಿಕರು ಕೂಡ ಅದಕ್ಕೆ ಅಗತ್ಯ ಸಹಕಾರ ನೀಡಬೇಕು. ಜನರ ಅಪೇಕ್ಷೆ ಹಾಗೂ ಕಾಳಜಿಗೆ ಸರ್ಕಾರ
ಸ್ಪಂದಿಸಲು ಸದಾ ಸಿದ್ಧವಿದೆ ಎಂದು ಅವರು ಹೇಳಿದರು.ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಅನುಕೂಲ ವಾಗುವಂತೆ ಈ ಕಚೇರಿಯನ್ನು ಆರಂಭಿಸಲಾಗಿದೆ, ಇದು ಬ್ರಿಟಿಷರ ಕಾಲದ ಬಂಗಲೆಯಾಗಿದ್ದು ಶಿಥಿಲಗೊಂಡಿತ್ತು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅದನ್ನು ನವೀಕರಿಸಲಾಗಿದೆ ಎಂದರು. ಶಾಸಕರಾದ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್ ಸೇರಿದಂತೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.