ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 62 ನೇ ಜನ್ಮ ದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸೇರಿ ಗಣ್ಯರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಜನ್ಮದಿನದ ಶುಭಾಶಯ
ಕೋರಿದ್ದಾರೆ.ಇಂದು ತಮ್ಮ ಜನ್ಮದಿನದ ಅಂಗವಾಗಿ ತಮ್ಮ ಆರ್.ಟಿ. ನಗರದ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು. ಬಳಿಕ ಶ್ರೀ ಭಗವಾನ್ ಶ್ರೀಮಾರುತಿ ದೇವಸ್ಥಾನಕ್ಕೆ ಭೇಟಿ ನೀಡಿ, ಆಂಜನೇಯನ ಆಶೀರ್ವಾದ ಪಡೆದರು. ಎಲ್ಲರ ಹಾರೈಕೆಗಳು ಇನ್ನಷ್ಟು ಸ್ಪೂರ್ತಿಯಿಂದ ಮತ್ತು ಗಟ್ಟಿಯಾಗಿ ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮಾಡಿರುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಹೇಳಿದರು. ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಇಂದು 6 ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕಿರು ಹೊತ್ತಿಗೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಡುಗಡೆ ಮಾಡಲಾಗುವುದು. ಕಳೆದ 6 ತಿಂಗಳಲ್ಲಿ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ, ರೈತರಿಗೆ, ಮಹಿಳೆಯರಿಗೆ ತೆಗೆದುಕೊಂಡಿರುವ ತೀರ್ಮಾನ ಹಾಗೂ ಅದರ ಪರಿಣಾಮಗಳ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.