*ಗಂಗಾಧರ ಕಲ್ಲಪಳ್ಳಿ
ಸುಳ್ಯ:ರಾಜ್ಯದ ಮತ್ತು ದೇಶದ ಆಡಳಿತ ವ್ಯವಸ್ಥೆಗೆ ಜಿಲ್ಲೆಯಿಂದ ಸಮರ್ಥವಾದ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಕೊಡ ಮಾಡಬೇಕು ಎಂಬ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಸುಳ್ಯದಲ್ಲಿ ಆರಂಭಗೊಳ್ಳಲಿದೆ. ನಮ್ಮ ಜ್ಞಾನದ ಭಂಡಾರಗಳೆಂದರೆ ಗ್ರಂಥಾಲಯಗಳು. ಸಾರ್ವಜನಿಕರಿಗೆ ಜ್ಞಾನವನ್ನು ಧಾರೆಯೆರೆಯುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ

ವತಿಯಿಂದ ಕನಸಿನ ಅಧ್ಯಯನ ಕೇಂದ್ರ ಸಾಕಾರಗೊಳ್ಳಲಿದೆ. ಇದಕ್ಕಾಗಿ ಸುಳ್ಯ ಕೇಂದ್ರ ಗ್ರಂಥಾಲಯಕ್ಕೆ ತಾಗಿಕೊಂಡೇ ಸುಂದರ ಕಟ್ಟಡ ನಿರ್ಮಾಣಗೊಂಡಿದೆ. ಗ್ರಂಥಾಲಯದ ವಿಸ್ತೃತ ಚಟುವಟಿಕೆಗಳಿಗಾಗಿ ನಿರ್ಮಾಣಗೊಂಡ ಆಕರ್ಷಕವಾಗಿ ಕಂಗೊಳಿಸುವ ಈ ಕಟ್ಟಡ ಮುಂದೆ ನೂರಾರು ಯುವಕರ ಕನಸನ್ನು ಸಾಕಾರಗೊಳಿಸುವ ಕೇಂದ್ರವಾಗಿ ರೂಪುಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರ ಮುತುವರ್ಜಿಯಿಂದ ಸಚಿವರ ಕ್ಷೇತ್ರದಲ್ಲಿ ಅಧ್ಯಯನ ಕೇಂದ್ರ ಆರಂಭಗೊಳ್ಳಲಿದೆ. ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಗಾಯತ್ರಿ ಅವರ ನೇತೃತ್ವದಲ್ಲಿ ಅಧ್ಯಯನ ಕೇಂದ್ರ ಆರಂಭಕ್ಕೆ ರೂಪುರೇಷೆ ತಯಾರಿಸಲಾಗಿದೆ. ಭವಿಷ್ಯದ ವರದಾನಗಳಾದ ಯುವ ಜನತೆಗೆ ವಿದ್ಯಾರ್ಥಿ ಜೀವನದಲ್ಲಿ ಯಾವುದನ್ನು ಅಧ್ಯಯನ ನಡೆಸಬೇಕು, ಯಾವ ಶಿಕ್ಷಣ ಆಯ್ಕೆ ಮಾಡಬೇಕು,ಯಾವ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಬಹುದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬಹುದು. ಅದಕ್ಕೆ ಸಿದ್ಧತೆ ಹೇಗೆ.. ಇದ್ಯಾವುದೂ

ಗೊತ್ತಿರುವುದಿಲ್ಲ. ಅದಕ್ಕೆ ಬೇಕಾದ ಮಾರ್ಗದರ್ಶನ, ಅಧ್ಯಯನ ಪುಸ್ತಕಗಳು ದೊರೆಯದ ಸಮಸ್ಯೆ ಇದೆ. ಆದುದರಿಂದಲೇ ದ.ಕ.ಜಿಲ್ಲೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಯನ್ನು ಪಡೆಯುವುದರಲ್ಲಿ ಮಾತ್ರವಲ್ಲದೆ ಸರಕಾರಿ ಕ್ಷೇತ್ರಕ್ಕೆ ಸೇರ್ಪಡೆ ಆಗುವುದಕ್ಕೆ ಜಿಲ್ಲೆಯ ಯುವ ಜನಾಂಗ ಹಿಂದೆ ಬಿದ್ದಿದೆ. ಇದನ್ನು ಪರಿಹರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗುವಂತೆ ಮಾಡಲು ಯುವ ಜನಾಂಗವನ್ನು ಸಿದ್ಧಪಡಿಸುವುದು ಅಧ್ಯಯನ ಕೇಂದ್ರದ ಮೂಲ ಉದ್ದೇಶ. ಅದಕ್ಕಾಗಿ ಬೇಕಾದ ಎಲ್ಲಾ ಸ್ಪರ್ಧಾತ್ಮಕ ಪುಸ್ತಕಗಳನ್ನು, ಅಧ್ಯಯನ ಸಾಮಾಗ್ರಿಗಳನ್ನು ಒದಗಿಸುವುದು. ಅಧ್ಯಯನಕ್ಕೆ ಬೇಕಾದ ವ್ಯವಸ್ಥೆ ಒದಗಿಸಲಾಗುತ್ತದೆ.ಜೊತೆಗೆ ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು

ಎದುರಿಸಲು ಬೇಕಾದ ಮಾರ್ಗದರ್ಶನ, ತರಬೇತಿ, ತರಗತಿಗಳನ್ನು ನಿರಂತರ ಆಯೋಜಿಸುವುದು. ಹಿರಿಯ ಅಧಿಕಾರಿಗಳು ಸೇರಿದಂತೆ ಪರಿಣಿತರಿಂದ ತರಬೇತಿ ಹಾಗು ತರಗತಿಗಳನ್ನು ಸಂಯೋಜಿಸಲಾಗುತ್ತದೆ. ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಹೊಸ ಆವೃತ್ತಿಯ ಪುಸ್ತಕಗಳು ಈಗಾಗಲೇ ಕೇಂದ್ರ ಗ್ರಂಥಾಲಯದಲ್ಲಿ ಲಭ್ಯವಿದೆ. ಅಧ್ಯಯನ ಕೇಂದ್ರ ಆರಂಭವಾಗುತ್ತಿದ್ದಂತೆ ಇನ್ನಷ್ಟು ಪುಸ್ತಕಗಳನ್ನು ತರಲಾಗುತ್ತದೆ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಗಾಯತ್ರಿ ಹೇಳುತ್ತಾರೆ.
ಯಾವುದೆಲ್ಲಾ ಪುಸ್ತಕ ಲಭ್ಯ:
ಹಲವು ಸ್ಪರ್ಧಾತ್ಮಕ ಪುಸ್ತಕಗಳು ಈಗಾಗಲೇ ಕೇಂದ್ರ ಗ್ರಂಥಾಲಯದಲ್ಲಿ ಲಭ್ಯವಿದೆ. ಕೆಎಎಸ್,ಐಎಎಸ್,ಜೆಇಇ, ಎಸ್ಎಸ್ಸಿ, ಕೆ-ಸೆಟ್, ಎನ್ಸಿಇಆರ್ಟಿ, ಗೇಟ್, ಪಿಎಸ್ಐ, ಸಿಇಟಿ, ಜೆಎಒ, ಕೆಪಿಎಸ್ಸಿ, ಇಎಸ್ಐ, ಜನರಲ್ ಸ್ಟಡಿ, ನೀಟ್, ಎಸ್ಡಿಎ, ಎಫ್ಡಿಎ, ಮ್ಯಾಟ್, ಆರ್ಆರ್ಬಿ/ಆರ್ಆರ್ಸಿ, ಯುಜಿಸಿ,ಪಿಡಿಒ,ಎಸ್ಎಸ್ಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ

ಲೇಟೆಸ್ಟ್ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದೆ. ಇದು ಇನ್ನಷ್ಟು ಒದಗಿಸುವುದರ ಜೊತೆಗೆ ಮುಂದೆ ಅಧ್ಯಯನ ಕೇಂದ್ರದಲ್ಲಿ ಇದಕ್ಕೆ ಪೂರಕವಾದ ತರಬೇತಿಗಳನ್ನೂ ನೀಡಲಾಗುವುದು
ಇನ್ನು ಏನೇನು ಆಗಬೇಕು:
ಅಧ್ಯಯನ ಕೇಂದ್ರಕ್ಕೆ ಕೇಂದ್ರ ಗ್ರಂಥಾಲಯಕ್ಕೆ ಸಮೀಪದಲ್ಲಿಯೇ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಿದೆ. ತರಬೇತಿ, ಅಧ್ಯಯನಕ್ಕೆ ಇಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನು ಇಲ್ಲಿ ಪೀಠೋಪಕರಣ, ಪ್ರೊಜೆಕ್ಟರ್, ಕಂಪ್ಯೂಟರ್ಗಳ ಅಳವಡಿಕೆ ಆಗಬೇಕಾಗಿದೆ. ಸಚಿವ ಎಸ್.ಅಂಗಾರ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರದ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧ್ಯಯನ

ಕೇಂದ್ರ ಆರಂಭಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕೂಡಲೇ ಒದಗಿಸಲಾಗುವುದು. ಅದಕ್ಕೆ ಬೇಕಾದ ಪಟ್ಟಿ ನೀಡುವಂತೆ ಸಚಿವರು ಸೂಚಿಸಿದರು.ತರಬೇತಿಗೆ ಸಹಾಯಕವಾಗುವಂತೆ ಕಟ್ಟಡದ ಮೇಲೆ ಸಭಾ ಭವನ ನಿರ್ಮಿಸಲಾಗುವುದು ಎಂದು ಸಚಿವ ಅಂಗಾರ ತಿಳಿಸಿದರು. ಅದಕ್ಕಾಗಿ ಎಸ್ಟಿಮೇಟ್ ತಯಾರಿಸಲು ಸಚಿವರು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಸಚಿವರ ಜೊತೆಗಿದ್ದರು.
‘ಜಿಲ್ಲೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಿ ಉನ್ನತ ಹುದ್ದೆ ಪಡೆಯುವವರು,ಸರಕಾರಿ ಸೇವೆ ಸೇರುವವರ ಸಂಖ್ಯೆ ತೀರಾ ಕಡಿಮೆ ಇದೆ. ಮಾರ್ಗದರ್ಶನ, ತರಬೇತಿಯ ಕೊರತೆಯೂ ಇದಕ್ಕೆ ಒಂದು ಕಾರಣ. ಅದಕ್ಕಾಗಿ ಒಂದು ಅಧ್ಯಯನ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ.ಪೂರಕ ವ್ಯವಸ್ಥೆ ಮಾಡಿಕೊಂಡು ಸದ್ಯದಲ್ಲಿಯೇ ಕೇಂದ್ರ ಆರಂಭಿಸಲಾಗುವುದು’
-ಎಸ್.ಅಂಗಾರ
ಜಿಲ್ಲಾ ಉಸ್ತುವಾರಿ ಸಚಿವರು.
