ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕಾರಣಕ್ಕೆ ಲಾಕ್ಡೌನ್ ಅಥವಾ ಇನ್ನಷ್ಟು ಕಠಿಣ ನಿಯಮ ಜಾರಿಗೆ ತರುವ ಉದ್ದೇಶವಿಲ್ಲ. ವಾರಂತ್ಯ ಕರ್ಫ್ಯೂ ಮುಂದುವರಿಸಬೇಕೆ ಅಥವಾ ಸಡಿಲಗೊಳಿಸಬೇಕೇ ಎಂಬ ಬಗ್ಗೆ ಶುಕ್ರವಾರ ತುರ್ತುಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.ಸೋಮವಾರ ನಡೆದ ಕೋವಿಡ್ ಕುರಿತ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ
ತಿಳಿಸಿದರು. ಕೋವಿಡ್ ಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಬೇಕಾಗಿದೆ. ಪ್ರಕರಣಗಳು ಇಳಿಕೆಯಾದರೆ ನಿಯಮಗಳನ್ನು ಸಡಿಲಿಸಲಾಗುವುದು ಎಂದರು.ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಶುಕ್ರವಾರದವರೆಗೆ ಶಾಲಾ–ಕಾಲೇಜುಗಳು ಯಥಾಸ್ಥಿತಿ ಮುಂದುವರೆಯಲಿವೆ. ಬಳಿಕ ಆ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು.ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ 19 ಕುರಿತ ಪರಿಶೀಲನಾ ಸಭೆ ನಡೆಯಿತು. ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಆಕ್ಸಿಜನ್ ಪ್ಲಾಂಟ್ಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದೆ.ಆಸ್ಪತ್ರೆಗಳಲ್ಲಿ ಜನರೇಟರುಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ
ನಿಗಾ ವಹಿಸಬೇಕು. ಲಸಿಕೆ ಅಭಿಯಾನ ತ್ವರಿತವಾಗಿ ಪೂರ್ಣಗೊಳಿಸಲು,ಔಷಧಿಗಳನ್ನು ಕೂಡಲೇ ಒದಗಿಸಲು, ಅವುಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಕ್ರಮ ವಹಿಸಲು ಸೂಚಿಸಲಾಯಿತು. ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.
ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒ ಗಳೊಂದಿಗೆ ವಿಡಿಯೋ ಸಂವಾದ ನಡೆಸಲು ನಿರ್ಧರಿಸಲಾಯಿತು.15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಸೂಚಿಸಲಾಯಿತು.