ಸುಳ್ಯ:ಇಲಾಖೆಗಳಿಂದ ನೀಡುವ ಸೌಲಭ್ಯಗಳನ್ನು ಬಳಸಿ ಶಿಕ್ಷಣ,ಉದ್ಯೋಗ ಪಡೆಯುವುದರ ಜೊತೆಗೆ ಸ್ವ ಉದ್ಯೋಗ ಮಾಡಿಕೊಂಡು ಬದುಕನ್ನು ಕಟ್ಟಿ ಕೊಳ್ಳಬೇಕು
ಎಂದು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸುಳ್ಯ ತಾಲೂಕು ಪಂಚಾಯತ್ ವತಿಯಿಂದ ಡಿ. ದೇವರಾಜ ಅರಸು ಭವನ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ

ಹಾಗೂ ಕರುಂಜಿಭಾಗ್ನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಮೇಲಂತಸ್ತಿನ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಸುಳ್ಯದ ಉಬರಡ್ಕ ಮಿತ್ತೂರಿನ ಕೊಡಿಯಾಲ್ ಬೈಲ್ನ ದೇವರಾಜ ಅರಸು ಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಭಿವೃದ್ಧಿಯ ನಿರೀಕ್ಷೆ ಮತ್ತು ವಿಶ್ವಾಸದಿಂದ ಜನರು ಮತ ನೀಡಿ ಕ್ಷೇತ್ರದಿಂದ ಆರಿಸುತ್ತಾರೆ. ಅಂತಹಾ ಅಧಿಕಾರವನ್ನು ಬಳಸಿಕೊಂಡು ಶಾಶ್ವತವಾಗಿ ಅಭಿವೃದ್ಧಿ ಮಾಡಿ ಮೇಲ್ಪಂಕ್ತಿ ಹಾಕಿದವರು ಕಡಿಮೆ. ಸಮಾಜದ ಉದ್ದಾರಕ್ಕಾಗಿ ಶಾಶ್ವತವಾಗಿ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಯ ಹರಿಕಾರರಾಗಿದ್ದವರು ದೇವರಾಜ ಅರಸು ಎಂದು ಅವರು ಹೇಳಿದರು. ಕಳೆದ 27 ವರ್ಷಗಳಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಸುಳ್ಯ ಕ್ಷೇತ್ರದಲ್ಲಿ
ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ.ಪ್ರಥಮ ದರ್ಜೆ ಕಾಲೇಜು,ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕ್ಷೇತ್ರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ರಸ್ತೆಯಾಗಿ ಮೇಲ್ದರ್ಜೆಗೇರಿಸಿ

ಅಭಿವೃದ್ಧಿ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ.ರಸ್ತೆಯ ಅಭಿವೃದ್ಧಿಗೆ ಕೇಂದ್ರ ಹಾಗು ರಾಜ್ಯದ ಅನುದಾನ ತಂದು ಅಭಿವೃದ್ದಿ ಮಾಡಲಾಗುತ್ತಿದೆ. ಈ ಭಾಗದ ಪ್ರಮುಖ ಬೇಡಿಕೆಯಾದ ಸುಳ್ಯ- ಕೊಡಿಯಾಲಬೈಲು- ದುಗ್ಗಲಡ್ಕ ರಸ್ತೆಯ ಅಭಿವೃದ್ಧಿ ಮಾಡುತ್ತೇವೆ.ಈ ರಸ್ತೆಯ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರು ಯಾವುದೇ ಗೊಂದಲ ಪಡುವ ಅಗತ್ಯ ಇಲ್ಲ ಎಂದು ಸಚಿವರು ಹೇಳಿದರು.ಅಂಬೇಡ್ಕರ್ ಭವನದ ಉಳಿದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಅನುದಾನ ಬಿಡುಗಡೆ ಮಾಡಿದ್ದಾರೆ.ಎಲ್ಲಾ ಇಲಾಖೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಖಾಲಿ ಇರುವ ಸಿಬ್ಬಂದಿಗಳ, ಅಧಿಕಾರಿಗಳ ನೇಮಕ ಮಾಡುವ ಅಗತ್ಯ ಇದೆ. ಇದಕ್ಕಾಗಿ ಸರಕಾರ ಯೋಜನೆ ರೂಪಿಸುತಿದೆ ಎಂದು ಸಚಿವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಹಲವು ಬದಲಾವಣೆಗಳು ಆಗಿದೆ. ವಿದ್ಯಾರ್ಥಿ ನಿಲಯಗಳ ಸಂಖ್ಯೆ ಹೆಚ್ಚಾಗಿದೆ.ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಈಗ ಹಾಸ್ಟೇಲ್ ಸಿಗುವ ವ್ಯವಸ್ಥೆ ಇದೆ.ಇಲ್ಲಿ ಖಾಲಿ ಇರುವ ಸಿಬ್ಬಂದಿಗಳ

ನೇಮಕ ಆಗಬೇಕಾಗಿದೆ ಎಂದರು. ಉಬರಡ್ಕ ವಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಾ ಕುಮಾರಿ, ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ,ಗ್ರಾಮ ಪಂಚಾಯತ್ ಸದಸ್ಯೆ ಮಮತಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶುಭಾ ಎ, ಭಾಗವಹಿಸಿದ್ದರು. ಹಿಂದುಳಿದ ವರ್ಗಗಳ ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಲಯ ಮೇಲ್ವಿಚಾರಕಿ ದೀಪಿಕಾ ವಂದಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.