ಸುಳ್ಯ:ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ನಿಟ್ಟೆಯ ಇನ್ಕ್ಯೂಬೇಷನ್ ಸೆಂಟರ್ ಇದರ ಸರಕಾರದಲ್ಲಿ ಆರಂಭಗೊಂಡ ಸುಳ್ಯ ರೈತ ಉತ್ಪಾದಕ ಕಂಪೆನಿಯ ಉದ್ಘಾಟನೆ ನಡೆಯಿತು. ಸಂಸ್ಥೆಯ ನೂತನ ಕಚೇರಿ ಸುಳ್ಯ ಎಪಿಎಂಸಿ ಕಟ್ಟಡದಲ್ಲಿ ಪ್ರಾರಂಭಗೊಂಡಿತು. ಬಳಿಕ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ

ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಂಸದ ನಳಿನ್ಕುಮಾರ್ ಕಟೀಲ್ ಮಧ್ಯವರ್ತಿಗಳಿಂದ ರೈತ ಮುಕ್ತವಾಗಬೇಕೆಂಬುದು ಎಫ್.ಪಿ.ಒ. ಸ್ಥಾಪನೆಯ ಉದ್ದೇಶವಾಗಿದೆ.ರೈತರನ್ನು ಮಧ್ಯವರ್ತಿಗಳಿಂದ ಮುಕ್ತಗೊಳಿಸಿ, ಉತ್ಪಾದನೆ ದ್ವಿಗುಣಗೈದು, ಎರಡು ಪಟ್ಟು ಬೆಲೆ ದೊರೆಯುವಂತೆ ಮಾಡುವ ರೈತ ಉತ್ಪಾದಕರ ಸಂಘಗಳನ್ನು ರಚಿಸುವ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಕೃಷಿ ಪ್ರದಾನ ಕ್ಷೇತ್ರವಾದ ಸುಳ್ಯದಲ್ಲಿ ಒಂದು ಸಾವಿರ ಸದಸ್ಯತ್ವ ಸೇರಿಸಿ ರೈತ ಉತ್ಪಾದಕ ಸಂಘ ರಚನೆ ಮಾಡಿರುವುದು ಶ್ಲಾಘನೀಯ ವಿಚಾರ ಎಂದರು. ಇದರಿಂದ ರೈತರಿಗೆ ಸ್ವಾವಲಂಬಿ ಬದುಕು ನಡೆಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಿದರು. ಸುಳ್ಯ ಎ.ಪಿ.ಎಂ.ಸಿ. ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು, ಕೃಷಿ ಇಲಾಖೆಯ ಜಂಟಿ
ನಿರ್ದೇಶಕಿ ಸೀತಾ ಎಂ.ಸಿ. ,ನಿಟ್ಟೆ ಅಟಲ್ ಇನ್ ಕ್ಯುಬೇಷನ್ ಸೆಂಟರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಪಿ.ಆಚಾರ್ ಮುಖ್ಯ ಅತಿಥಿಗಳಾಗಿದ್ದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ ಹಾಗೂ ಅಟಲ್ ಇನ್ಕ್ಯುಬೇಶನ್ ಸೆಂಟರ್ನ ಯೋಜನಾ ಸಂಯೋಜಕಿ ದೀಕ್ಷಾ ರೈ ಯವರನ್ನು ಸಹಕಾರಕ್ಕಾಗಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಮಧುರಾ ಜಗದೀಶ್ ಸನ್ಮಾನಿತರ ಪರಿಚಯ ಮಾಡಿದರು.
ಪ್ರಸಾದ್ ಸೇವಿತ ಕಾರ್ಯಕ್ರಮ ನಿರೂಪಿಸಿದರು.