ನವದೆಹಲಿ: ಪ್ರಸಕ್ತ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಸೇರ್ಪಡೆಯಾಗಲಿರುವ ಎರಡು ಹೊಸ ತಂಡಗಳ ನಾಯಕರ ಆಯ್ಕೆ ಈಗ ಅಧಿಕೃತಗೊಂಡಿದೆ. ಅಹಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ, ಲಖನೌ ತಂಡ್ಕೆ ಕೆ.ಎಲ್.ರಾಹುಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಉಭಯ
ಫ್ರಾಂಚೈಸ್ಗಳಿಗೆ ಅವಕಾಶ ನೀಡಲಾಗಿತ್ತು. ಇದೀಗ ಎರಡೂ ತಂಡಗಳು ನಾಯಕ ಯಾರೆಂಬುದನ್ನು ಅಂತಿಮಗೊಳಿಸಿವೆ.ಅಹಮದಾಬಾದ್ ತಂಡವು ಹಾರ್ದಿಕ್ ಪಾಂಡ್ಯ ಮತ್ತು ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರನ್ನು ತಲಾ 15 ಕೋಟಿ ಮೊತ್ತಕ್ಕೆ ಖರೀದಿ ಮಾಡಿವೆ. ಶುಭಮನ್ ಗಿಲ್ ಅವರನ್ನು 7 ಕೋಟಿಗೆ ಖರೀದಿಸಿದೆ. ಆರ್ಪಿಎಸ್ಜಿ ಸಮೂಹದ ಒಡೆತನದ ಲಖನೌ ಫ್ರಾಂಚೈಸ್ ಕೆ.ಎಲ್.ರಾಹುಲ್ ಅವರನ್ನು 17 ಕೋಟಿ ಮೊತ್ತಕ್ಕೆ ಖರೀದಿಸಿದೆ. ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು 9.2 ಕೋಟಿ ಹಾಗೂ ರವಿ ಬಿಷ್ಣೋಯಿ ಅವರನ್ನು 4 ಕೋಟಿಗೆ ಖರೀದಿಸಿದೆ. ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆಬ್ರುವರಿ 12 ಹಾಗೂ 13ರಂದು ನಡೆಯುವ ಸಾಧ್ಯತೆ ಇದೆ