ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಪ್ರಯುಕ್ತ ದೆಹಲಿಯಲ್ಲಿ ನೇತಾಜಿಯವರ ಹಾಲೊಗ್ರಾಮ್ ಪ್ರತಿಮೆ ಅನಾವರಣಗೊಳ್ಳಲಿದೆ. ದೆಹಲಿಯಲ್ಲಿನ ಇಂಡಿಯಾ ಗೇಟ್ ಹಿಂದಿನ ಮಂಟಪದಲ್ಲಿ ಹಾಲೊಗ್ರಾಮ್ (ಮೂರು ಆಯಾಮಗಳಿರುವ ಬೆಳಕಿನ ಚಿತ್ರ) ಪುತ್ಥಳಿಯನ್ನು ಸಂಜೆ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ನೇತಾಜಿಯವರ ಪುತ್ಥಳಿ ಗ್ರಾನೈಟ್ ನಲ್ಲಿ ನಿರ್ಮಾಣವಾಗುವವರೆಗೆ ಬೆಳಕಿನ ಮೂಲಕ ಆಕೃತಿ
ರೂಪಿಸಲಾಗಿರುತ್ತದೆ. ಇದು 4ಕೆ ಪ್ರೊಜೆಕ್ಟರ್ ಮೂಲಕ ಚಾಲಿತವಾಗಲಿದ್ದು, 30ಸಾವಿರ ಲ್ಯುಮೆನ್ಸ್ ನಷ್ಟು ಬೆಳಕಿರುತ್ತದೆ. ನೇತಾಜಿ ಅವರ ಹಾಲೋಗ್ರಾಂ ಪ್ರತಿಮೆ 28 ಅಡಿ ಎತ್ತರ ಮತ್ತು 6 ಅಡಿ ಅಗಲ ಇರಲಿದೆ. ಈ ಭವ್ಯ ಪುತ್ಥಳಿ ರಾಜಪಥ್ನ ಇಂಡಿಯಾ ಗೇಟ್ ಹಿಂದೆ ಇದ್ದ ಅಮರ್ ಜವಾನ್ ಜ್ಯೋತಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕ ನಡುವಿನ ಮಂಟಪದಲ್ಲಿ ನಿರ್ಮಾಣಗೊಳ್ಳಲಿದೆ. ಈ ಮಂಟಪ 150 ಮೀಟರ್ ಎತ್ತರದಲ್ಲಿದೆ.
ಇದೇ ಮಂಟಪದಲ್ಲಿ ಭಾರತವನ್ನು ಆಳಿದ ಬ್ರಿಟಿಷ್ ದೊರೆ 5ನೇ ಜಾಜರ್ ಪ್ರತಿಮೆ ಇತ್ತು. ನಂತರ 1968ರಲ್ಲಿ ಅದನ್ನು ದೆಹಲಿಯ ಕೊರೊನೇಷನ್ ಪಾರ್ಕ್ ಗೆ ಸ್ಥಳಾಂತರ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಮಂಟಪ ಖಾಲಿಯಾಗಿಯೇ
ಉಳಿದಿತ್ತು. ಇನ್ನು ಮುಂದೆ ಈ ಮಂಟಪದಲ್ಲಿ ಸುಭಾಷ್ ಚಂದ್ರ ಬೋಸರ ಭವ್ಯವಾದ ಪುತ್ಥಳಿ ತಲೆ ಎತ್ತಲಿದೆ.ಇಂದು ಬೋಸರ ಜನ್ಮ ದಿನದ ಪ್ರಯುಕ್ತ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶದ ಜನತೆಗೆ ಪರಾಕ್ರಮ್ ದಿನ ಹಬ್ಬದ ಶುಭಾಶಯಗಳು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವದಂದು ಗೌರವಾನ್ವಿತ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಅವರ ಜಯಂತಿಯಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ನಮಸ್ಕರಿಸುತ್ತೇನೆ ಹೇಳಿದ್ದಾರೆ.