ಮಂಗಳೂರು:ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19ರ ಕ್ಲಸ್ಟರ್ಗಳು ಪತ್ತೆಯಾಗುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಮಾರ್ಗಸೂಚಿಗಳು ಇಂತಿವೆ:
ಮೆಡಿಕಲ್, ಪ್ಯಾರಮೆಡಿಕಲ್ ಇತರ ವೈದ್ಯಕೀಯ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೋವಿಡ್ ಲಕ್ಷಣಗಳು ಇರುವ ಬಗ್ಗೆ ಪ್ರತಿ ದಿನ ಸ್ಕ್ರೀನಿಂಗ್ ಮಾಡಿಸಬೇಕು ಮತ್ತು ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರನ್ನು ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯನ್ವಯ ಚಿಕಿತ್ಸೆಗೆ
ಒಳಪಡಿಸಬೇಕು. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾಕೂಟ,ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದಿನ ಅದೇಶದವರೆಗೆ ನಿಷೇಧಿಸಲಾಗಿದೆ.ಶಿಕ್ಷಣ ಸಂಸ್ಥೆಗಳಲ್ಲಿ ಸಮ್ಮೇಳನಗಳು, ಸಮಿನಾರ್ಗಳು, ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಾಧ್ಯವಿದ್ದರೆ ಮುಂದೂಡುವುದು, ಪರ್ಯಾಯವಾಗಿ ಅದನ್ನು ವರ್ಚ್ಯೂವಲ್ ಮೂಲಕ ನಡೆಸಲು ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಇತರ ಯಾವುದೇ ಕಾರ್ಯಮಗಳನ್ನು ನಡೆಸಬೇಕಾದಲ್ಲಿ ಕಡ್ಡಾಯವಾಗಿ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆಯಬೇಕು.ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕ್ಯಾಂಪಸ್ನೊಳಗೆ ಕೋವಿಡ್ ಸಮುಚಿತ ವರ್ತನೆಗಳನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಆರೋಗ್ಯ ವೃತ್ತಿಪರರು ಇತರ ಕ್ಷೇತ್ರಗಳಲ್ಲಿನ ವೃತ್ತಿಪರರಿಗೆ ಸಮ್ಮೇಳನಗಳು, ಸೆಮಿನಾರ್ಗಳು, ಸಿ.ಎಂ.ಇ ಸ್ಟೇಷನ್ಗಳಿಗೆ ಆನ್ಲೈನ್ ಮೂಲಕ ಸಂದೇಶವನ್ನು ಕಳುಹಿಸುವಂತೆ ಕ್ರಮ ವಹಿಸಬೇಕು.ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪಾಲಕರೊಂದಿಗೆ ಚರ್ಚಿಸಿ ಭೌತಿಕ ಅಥವಾ ಆನ್ಲೈನ್ ಕ್ಲಾಸ್ಗಳ ನಡೆಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ 5 ಖಚಿತ ಕೋವಿಡ್-19 ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯನ್ನು ಒಂದು ವಾರ ಕಡ್ಡಾಯವಾಗಿ ಮುಚ್ಚಬೇಕು ಮತ್ತು ಆ ಶಿಕ್ಷಣ ಸಂಸ್ಥೆಯನ್ನು ಸ್ಯಾನಿಟೈಸ್ ಮಾಡಿಸಿ ಶುಚಿಗೊಳಿಸಬೇಕು. ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಆದಷ್ಟು ಬೇಗ
ವ್ಯಾಕ್ಸಿನೇಷನ್ ಪಡೆಯಲು ಕ್ರಮಕೈಗೊಳ್ಳಬೇಕು.ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಸಮಸ್ಯೆ ಅಥವಾ ಮಾಹಿತಿ ತಿಳಿದುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಖೆಯ ಉಪನಿರ್ದೇಶಕರು ಪ್ರಾರಂಭಿಸಿರುವ ಹೆಲ್ಪ್ಲೈನ್ ಸಂಪರ್ಕ ಸೇವೆಯನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19ರ ಕ್ಲಸ್ಟರ್ಗಳು ಪತ್ತೆಯಾಗುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ (ಓಮಿಕ್ರಾನ್) ವೈರಾಣುವಿನ ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಜಿಲ್ಲಾದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಈ ಆದೇಶ ಹೊರಡಿಸಿದ್ದಾರೆ.