ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ಕೊಡಿಯಾಲಬೈಲಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅರೆಭಾಷೆ ಪಾರಂಪರಿಕ ಗ್ರಾಮಕ್ಕೆ ಪ್ರಸ್ತಾಪವಾಗಿರುವ ಸ್ಥಳಕ್ಕೆ ಸಚಿವ ಎಸ್.ಅಂಗಾರ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಕಾಡೆಮಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಪಾರಂಪರಿಕ ಗ್ರಾಮಕ್ಕೆ 20 ಎಕರೆ ಜಾಗ ಬೇಕಾಗಿದೆ. ಆದರೆ
ಕೊಡಿಯಾಲಬೈಲಿನಲ್ಲಿ 17 ಎಕ್ರೆ ಜಾಗ ಇದ್ದು ಅದರಲ್ಲಿ 6 ಎಕ್ರೆ ಡೀಮ್ಡ್ ಫಾರೆಸ್ಟ್ ಇರುವುದರಿಂದ ಆ ಜಾಗವನ್ನು ಪಾರಂಪರಿಕ ಜಾಗಕ್ಕೆ ಕೊಡಲು ಸಾಧ್ಯವಿಲ್ಲವೆಂದು ಅರಣ್ಯ ಇಲಾಖೆಯವರು ಆಕ್ಷೇಪ ಸಲ್ಲಿಸಿದ್ದರು.ಈ ವಿಚಾರದ ಬಗ್ಗೆ ಪರಿಶೀಲಿಸಿ ಸ್ಥಳ ಮಂಜೂರು ಮಾಡುವ ಕುರಿತು ಚರ್ಚೆ ನಡೆಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಸುಳ್ಯ ವಲಯ ಅರಣ್ಯಾಧಿಕಾರಿ ಗಿರೀಶ್, ಪಂಜ ವಲಯ ಮಂಜುನಾಥ್ ಅರಣ್ಯ ಭೂಮಿಯ ಬಗ್ಗೆ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಸ್ಥಳದ ಬಗ್ಗೆ ಮಾಹಿತಿ ನೀಡಿದರು. ಇಕೋ ಟೂರಿಸಂ ಯೋಜನೆಯ ಪ್ರಕಾರ ಅರಣ್ಯ ನಾಶ ಮಾಡದೆಯೇ ಪಾರಂಪರಿಕ ಗ್ರಾಮ ನಿರ್ಮಾಣದ ಪ್ರಸ್ತಾಪವನ್ನು ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿ ಸಲಹೆ
ನೀಡಿದರು. ಲಭ್ಯ ಇರುವ ಸರಕಾರಿ ಭೂಮಿಯನ್ನು ಅರೆಭಾಷೆ ಅಕಾಡೆಮಿಯ ಮೂಲಕ ಪಾರಂಪರಿಕ ಗ್ರಾಮ ನಿರ್ಮಾಣಕ್ಕೆ ನೀಡಿ ಉಳಿದ ಡೀಮ್ಡ್ ಫಾರೆಸ್ಟ್ ಜಾಗವನ್ನು ಟ್ರೀ ಪಾರ್ಕ್ ಅಥವಾ ಇಕೋ ಟೂರಿಸಂ ಮೂಲಕ ಪಾರಂಪರಿಕ ಗ್ರಾಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಬಹುದು ಎಂದು ಸಚಿವ ಎಸ್.ಅಂಗಾರ ಅಭಿಪ್ರಾಯ ವ್ಯಕ್ತಪಡಿಸಿದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ,ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ,ಜಿ.ಪಂ. ಸಿ.ಇ.ಒ. ಡಾ.ಕುಮಾರ್, ಪುತ್ತೂರು ಎ.ಸಿ. ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಅನಿತಾಲಕ್ಷ್ಮೀ, ಆರ್ ಐ ಕೊರಗಪ್ಪ ಹೆಗ್ಡೆ, ಎಡಿಎಲ್ ಆರ್ ವೆಂಕಟೇಶ್ ಮೊದಲಾದವರು ಇದ್ದರು.