ಚಿತ್ರಗಳು:ಅನಿಲ್ ಎಚ್.ಟಿ.
ಹೊತ್ತು ಮುಳುಗುವ ಮುನ್ನ… ಸೂರ್ಯ ಅಲೆ ಕಡಲಲ್ಲಿ ಮುಳುಗುವ ಸಮಯದಲ್ಲಿ ಪ್ರಕೃತಿಯ ವರ್ಣ ವೈಭವವೇ ವರ್ಣನಾತೀತ.. ಸೂರ್ಯಾಸ್ತಮಯ ಸಂದರ್ಭದಲ್ಲಿ ಕಂಡು ಬಂದ ಮಡಿಕೇರಿಯ ರಾಜಾಸೀಟ್ನ ಮನಮೋಹಕ ದೃಶ್ಯವಿದು.. ಕಲಾವಿದನ ಕುಂಚದಲ್ಲಿ ಅರಳಿದ ಕತ್ತಲು ಬೆಳಕಿನಾಟದ ಆಕರ್ಷಕ ದೃಶ್ಯ ಕಾವ್ಯದಂತೆ ಭಾಸವಾಗುವ ಈ ಚಿತ್ರವನ್ನು ಹಿರಿಯ ಪತ್ರಕರ್ತ ಹಾಗು ಛಾಯಾಚಿತ್ರಗ್ರಾಹಕ ಅನಿಲ್.ಎಚ್.ಟಿ. ಸೆರೆ ಹಿಡಿದಿದ್ದಾರೆ. ಮಡಿಕೇರಿ ಎಂದರೆ ಭೂರಮೆಯ

ಸ್ವರ್ಗ. ಇಲ್ಲಿನ ಸಂಜೆ, ಅದರಲ್ಲೂ ರಾಜಾಸೀಟ್ನ ಸಂಜೆಯ ದೃಶ್ಯಗಳು, ಸೊಬಗು ವರ್ಣನಾತೀತ.. ರಾಜಾಸೀಟ್ನಲ್ಲಿ ಕುಳಿತು ತಣ್ಣನೆ ಬೀಸುವ ತಂಗಾಳಿಗೆ ಮೈಯೊಡ್ಡಿ ಪ್ರತಿ ಕ್ಷಣವೂ ನವ್ಯಾನುಭವ ನೀಡುವ ಸುಂದರ ಸಂಜೆಯನ್ನೂ, ಸೂರ್ಯಾಸ್ತಮಯದ ಸೊಬಗನ್ನೂ ವೀಕ್ಷಿಸುವ ಕ್ಷಣದ ಅನುಭವವೇ ಬೇರೆ. ಸೂರ್ಯಾಸ್ತಮಯದ ಸಮಯದಲ್ಲಿ ಸಪ್ತ ವರ್ಣಗಳು ಮೇಳೈಸಿ ಆಕಾಶದಲ್ಲಿ ಮತ್ತು ಪ್ರಕೃತಿಯಲ್ಲಿ ರೂಪುಗೊಳ್ಳುವ ಚಿತ್ತಾರವನ್ನು ನೋಡುವುದೇ ಕಣ್ಣಿಗೆ ಆನಂದ.. ಮನಸ್ಸಿಗೆ ಉಲ್ಲಾಸ. ಹಿಂದೆ ಕೊಡಗಿನ ರಾಜ ಹಾಗು ರಾಣಿ ಕುಳಿತು ಸೂರ್ಯಾಸ್ತಮಯ ವೀಕ್ಷಿಸುವ ಸ್ಥಳ ಕಾಲಾಂತರದಲ್ಲಿ ರಾಜಾಸೀಟ್ ಆಯಿತು. ಪ್ರಸಿದ್ಧ ಉದ್ಯಾನವನವಾಗಿ ಮನೆ ಮಾತಾದ ರಾಜಾ ಸೀಟ್ ಪ್ರತಿ ದಿನವೂ ಸಾವಿರಾರು ಮಂದಿಯ ಮನ ತಣಿಸುವ ಸೌಂದರ್ಯದ ತಾಣವೂ ಹೌದು. ಸಂಜೆಯ ವೇಳೆಯಂತೂ

ರಾಜಾಸೀಟ್ ತುಂಬಿ ತುಳುಕುತ್ತಿರುತ್ತವೆ. ಮಡಿಕೆರಿಗೆ ಭೇಟಿ ನೀಡಿದವರು ಒಮ್ಮೆ ರಾಜಾಸೀಟ್ಗೆ ಒಂದು ರೌಂಡ್ ಹೊಡೆದು ಅಲ್ಲಿನ ತಂಗಾಳಿಗೆ ಮೈಯೊಡ್ಡಿ ಮನ ಪುಳಕಿತವಾಗದೆ ಹಿಂತಿರುಗುವುದಿಲ್ಲ.. ಅಲ್ಲಿನ ಮರದ ಕೆಳಗಿನ ಕಲ್ಲು ಬೆಂಚಿನ ಮೇಲೆ, ಹುಲ್ಲು ಹಾಸಿನ ಮೇಲೆ ಕುಳಿತು ಹಕ್ಕಿಗಳ ಇಂಚರವನ್ನು ಆಲಿಸುತ್ತಾ ಕುಳಿತರೆ ಮೈ ಮರೆತು ಹೊತ್ತು ಮುಳುಗುವುದೂ ಗೊತ್ತಾಗುವುದಿಲ್ಲ… ಎಲ್ಲವನ್ನೂ ಮರೆತು ಪ್ರಕೃತಿಯಲ್ಲಿ ಲೀನವಾದಂತೆ ಭಾಸವಾಗುತ್ತದೆ. ಅಂದ ಹಾಗೆ ಸಂಜೆಯ ವೇಳಗೆ ಮಡಿಕೇರಿಯಲ್ಲಿದ್ದರೆ ನೀವೂ ಒಮ್ಮೆ ಭೇಟಿ ನೀಡಿ..ಸಂಜೆಯ, ಹೊತ್ತು ಮುಳುಗುವ ಮುನ್ನ ಕತ್ತಲು ಬೆಳಕಿನಾಟದ ವರ್ಣ ವೈಭವವನ್ನು ಸವಿದು ಬನ್ನಿ…