ಮಂಗಳೂರು: 1837 ರಲ್ಲಿ ನಡೆದ ಅಮರ ಕ್ರಾಂತಿ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮ ರಾದವರ ಪೈಕಿ ಮಹತ್ವದ ಪಾತ್ರ ವಹಿಸಿದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯ ಸ್ಥಾಪಿಸಲು ಸಿದ್ಧತೆ ನಡೆದಿದೆ. ಕೆದಂಬಾಡಿ ರಾಮಯ್ಯ ಗೌಡ ಅವರ ಹೋರಾಟದ ಅವಿಸ್ಮರಣೀಯ ವಿಷಯಗಳನ್ನು ಮುಂದಿನ ತಲೆಮಾರಿಗೆ ನೀಡುವ ಆಶಯ ದಿಂದ ಅವರ ಪ್ರತಿಮೆಯನ್ನು
ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ನಿರ್ಮಿಸಬೇಕು ಎಂದು ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯು ಹಿಂದಿನ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು. ಇದರಂತೆ ದ.ಕ. ಜಿಲ್ಲಾಧಿಕಾರಿ ಅವರು ಬೆಂಗಳೂರಿನ ಕನ್ನಡಮತ್ತು ಸಂಸ್ಕೃತಿ ಇಲಾಖೆಗೆ ಅನುದಾನ ಮಂಜೂರಾತಿಗೆ ಶಿಫಾರಸು ಮಾಡಿದ್ದರು. ಹೀಗಾಗಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆ ಹಾಗೂ ಪ್ರಮುಖರ ಹೆಸರನ್ನು ಶಿಲೆಯಲ್ಲಿ ಅಚ್ಚು ಮೂಡಿಸಲು 10 ಲಕ್ಷ ರೂ.ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಮಂಜೂರು ಮಾಡಿದೆ. ಇದನ್ನು ಬಳಸಿ ಪ್ರತಿಮೆ ಪ್ರತಿಷ್ಠಾಪಿಸಲು ಪಾಲಿಕೆಯಿಂದ ನಿರ್ಣಯ ಮಾಡುವಂತೆ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯು ಪಾಲಿಕೆಯನ್ನು ಕೋರಿದೆ. ಪೂರಕವಾಗಿ ಮನಪಾ ಸ್ಥಳೀಯ ಸದಸ್ಯ ಎ.ಸಿ. ವಿನಯ್ರಾಜ್ ಅವರು ಮೇಯರ್ಗೆ ಪತ್ರ ಬರೆದು ಸ್ಮಾರಕ ಪ್ರತಿಷ್ಠಾಪಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ಸಂಭ್ರ ಮಾಚರಣೆಯ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸಲು ಸಾಧ್ಯವಾಗುವ ನೆಲೆಯಲ್ಲಿ ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆಗೆ ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದು ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ತಿಳಿಸಿದ್ದಾರೆ.
“1837 ರಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ ಹೋರಾಟದಲ್ಲಿ ಸಾಮಾನ್ಯ ರೈತಾಪಿ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದವರ ಕಥೆಯು ಮುಂದಿನ ತಲೆಮಾರಿಗೆ ಶಾಶ್ವತವಾಗಿ ದೊರೆಯಬೇಕಾಗಿದೆ. ಅಂದು ಹೋರಾಟದ ಮುಂಚೂಣಿಯಲ್ಲಿ ನಿಂತ ಕೆದಂಬಾಡಿ ರಾಮಯ್ಯ ಗೌಡರ ನೆನಪಿನಲ್ಲಿ ಮಂಗಳೂರಿನಲ್ಲಿ ಕಂಚಿನ ಪ್ರತಿಮೆ ಸ್ಥಾಪನೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.ಇದರಂತೆ ಒಪ್ಪಿಗೆ ದೊರೆತಿದ್ದು ,ಪಾಲಿಕೆಯು ಈ ನಿಟ್ಟಿನಲ್ಲಿ ವಿಶೇಷ ನೆರವು ನೀಡುವ ನಿರೀಕ್ಷೆಯಿದೆ. ರಾಮಯ್ಯ ಗೌಡರ ಪ್ರತಿಮೆ ಸ್ಥಾಪನೆ ಮತ್ತು ಅಂದು ಹೋರಾಟ ಮಾಡಿದ ಎಲ್ಲರ ಹೆಸರನ್ನು ಶಿಲೆಯಲ್ಲಿ ದಾಖಲಿಸುವುದು ನಮ್ಮಉದ್ದೇಶ.
-ಕಿರಣ್ ಬುಡ್ಲೆಗುತ್ತು , ಅಧ್ಯಕ್ಷರು. ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿ