ಮಂಗಳೂರು: ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಮರಳಿನ 20 ಬ್ಲಾಕ್ಗಳ ಟೆಂಡರ್ ಪ್ರಕ್ರಿಯೆಯನ್ನು ಬರುವ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಆಚಾರ್ ಹಾಲಪ್ಪ ಅವರು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು. ಅವರು ಜ.28ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಇಲಾಖೆಗಳ ಪ್ರಗತಿ

ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾವಳಿ ನಿಯಂತ್ರಣ ವಲಯಕ್ಕೊಳಪಡದ ಪ್ರದೇಶದಲ್ಲಿ ಈ ಹಿಂದೆ 30 ಮರಳು ಬ್ಲಾಕ್ಗಳಿಗೆ ಕರೆಯಲಾಗಿದ್ದ ಇ-ಟೆಂಡರ್ ಪ್ರಕ್ರಿಯೆ ನ್ಯಾಯಲಯದ ಆದೇಶದಂತೆ ಮುಂದುವರಿಸಲಾಗಿದೆ, ಆದರೆ 20 ಮರಳು ಬ್ಲಾಕ್ಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೇ ಇರುವುದು ಅಧಿಕಾರಿಗಳ ನಿರಾಸಕ್ತಿ ಕಾರಣವಾಗಿದೆ, ಕೂಡಲೇ ಅವುಗಳೀಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.ಮರಳಿಗೆ ಸಂಬಂಧಿಸಿದಂತೆ ಇರುವ 7 ಜನ ಸದಸ್ಯರ ಸಮಿತಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ರಚಿಸಲಾಗಿದೆ, ಸ್ಥಳೀಯ ಶಾಸಕರನ್ನು ಸಮಿತಿಗೆ ಸೇರಿಸಲು ಅವಕಾಶಗಳು ಲಭ್ಯವಿದ್ದಲ್ಲಿ ಅವರನ್ನು ಸೇರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು. ಮರಳು ತೆಗೆಯುವುದು ಹಾಗೂ ಅನಧೀಕೃತ ಮರಳು ಸಾಗಾಟದ ಬಗ್ಗೆ ರಚಿಸಲಾದ ಸಮಿತಿಯಲ್ಲಿ ಸ್ಥಳೀಯ ಶಾಸಕರನ್ನು ಸೇರಿಸಿಕೊಳ್ಳುವಂತೆ ಶಾಸಕರಾದ ಉಮನಾಥ ಕೋಟ್ಯಾನ್ ಹಾಗೂ ರಾಜೇಶ್ ನಾಯಕ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಚಿವರು ತಿಳಿಸಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ರಾಜ್ಯದ 30 ಜಿಲ್ಲೆಗಳ ಎಲ್ಲಾ ಕಚೇರಿಗಳಲ್ಲೂ ಕಂಪ್ಯೂಟರ್ ಸಹಿತ ಅಗತ್ಯ ಸೌಲಭ್ಯ ಹಾಗೂ ವಾಹನಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು. ಕರಾವಳಿ ನಿಯಂತ್ರಣ ವಲಯ ಹಾಗೂ ಕರಾವಳಿ ನಿಯಂತ್ರಣ ರಹಿತ ಸೇರಿದಂತೆ
ಒಟ್ಟಾರೆ ಜಿಲ್ಲೆಯಲ್ಲಿ ನಲವತ್ತು ಕಿಲೋ ಮೀಟರ್ಗೂ ಹೆಚ್ಚಿನ ಕರಾವಳಿ ಪ್ರದೇಶವಿದ್ದು, ಅನಧಿಕೃತ ಮರಳು ಸಾಗಾಣಿಕೆಯನ್ನು ನಿಯಂತ್ರಿಸಲು ಹಾಗೂ ಅಧಿಕೃತವಾಗಿ ಮರಳು ಗಣಿಗಾರಿಕೆ ಅವಕಾಶ ನೀಡುವ ಸಭೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ, ಅದೇ ರೀತಿ 7 ಜನರ ತಂಡದ ಸಮಿತಿಯಿಂದ ಕಾಲಕಾಲಕ್ಕೆ ನಿಯಮಿತವಾಗಿ ಸಭೆಯನ್ನು ನಡೆಸಲಾಗುತ್ತಿದೆ, ಕರಾವಳಿ ನಿಯಂತ್ರಣ ವಲಯದಡಿ ಪಾರಂಪಾರಿಕವಾಗಿ ನಡೆದು ಬಂದ ಸಾಂಪ್ರಾದಾಯಿಕ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು. ಅಕ್ರಮ ಮರಳುಗಾರಿಕೆ ಗಣಿಗಾರಿಕೆಗೆ ಕಡಿವಾಣ ಹಾಕಲಾಗುತ್ತಿದೆ ಎಂದ ಅವರು ತಿಳಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಇಲಾಖೆಯ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಹಾಗೂ ಅರ್ಜಿ ಸಲ್ಲಿಕೆ ವಿಧಾನಗಳನ್ನು ಸರಳೀಕರಣಗೊಳಿಸಲಾಗುತ್ತಿದೆ, ಉಳಿದಂತೆ ಸಿಸಿಟಿವಿಗಳನ್ನು ಕೂಡ ಅಳವಡಿಸಲಾಗುವುದು ಎಂದು ತಿಳಿಸಿದರು. ನಂತರ ಸಚಿವರು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿ, ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನಗಳನ್ನು ನಗರಾಭಿವೃದ್ದಿ ಪ್ರಾಧಿಕಾರದಿಂದ ಶೇ. 50ರ ಮೌಲ್ಯ ಪಾವತಿಸಿ ಖರೀದಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಗುರುತಿಸಿದ ಜಮೀನು ಅಂಗನವಾಡಿ ಕೇಂದ್ರಕ್ಕೆ ಸೂಕ್ತವಾಗದಲ್ಲಿ ಶುಲ್ಕ ಕಡಿತ ಮಾಡಲು ಕ್ರಮವಹಿಸಬೇಕು ಎಂದು ಸೂಚಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಪ್ರಭಾರ ಹಾಗೂ ಪ್ರಯಾಣ ಭತ್ಯೆಯನ್ನು ಹೆಚ್ಚಿಸುವುದಕ್ಕೆ ಕ್ರಮವಹಿಸಲಾಗುವುದು, ಮೊಟ್ಟೆ ಖರೀದಿಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಮೊಟ್ಟೆಯ ದರದಲ್ಲಿ ಏರಿಳತವಿರುವ ಕಾರಣ ಅದನ್ನು ತಾಲೂಕು ಮಟ್ಟದಲ್ಲಿ ಟೆಂಡರ್ ಮಾಡಿ ಅಲ್ಲಿಯೇ ಖರೀದಿಸುವಂತೆ ತಿಳಿಸಿದರು. ಅಂಗನವಾಡಿ ಕೇಂದ್ರ ಮತ್ತು ಹಾಸ್ಟೆಲ್ಗಳಿಗೆ ನರೇಗಾದಡಿ ಆವರಣ ಗೋಡೆ ನಿರ್ಮಿಸಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿದರು. ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ವೇದಿಕೆಯಲ್ಲಿದ್ದರು. ಶಾಸಕರಾದ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಡಾ. ಮಂಜುನಾಥ್ ಭಂಡಾರಿ ಮಾತನಾಡಿದರು. ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು.
.