ಮಂಗಳೂರು: ಜಿಲ್ಲೆಯಲ್ಲಿ ಇನ್ನೂ ಕೂಡ ಕೋವಿಡ್ ವ್ಯಾಕ್ಸಿನ್ನ ಮೊದಲ ಡೋಸ್ ಶೇ. 100ರಷ್ಟು ಪೂರ್ಣಗೊಳ್ಳದ ಬಗ್ಗೆ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಲಸಿಕೆ ನೀಡುವ ಕಾರ್ಯಕ್ಕೆ ಹೆಚ್ಚಿನ ಗಮನ ನೀಡಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ತಿಂಗಳ ಅಂತ್ಯದೊಳಗೆ ಮೊದಲ ಡೋಸ್ ಪೂರ್ಣಗೊಳಿಸುವಂತೆ ಅವರು ಸೂಚಿಸಿದ್ದಾರೆ,ಆ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಲಸಿಕಾ ಅಭಿಯಾನವನ್ನು ತೀವ್ರಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚನೆ
ನೀಡಿದರು.ಅವರು ಜ.19ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ವರ್ಚ್ಯೂವಲ್ ಮಾಧ್ಯಮದ ಮೂಲಕ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಭೆ ನಡೆಸಿದರು. ಮೊದಲ ಡೋಸ್ ನೀಡಿಕೆಯಲ್ಲಿ ಜಿಲ್ಲೆ ಶೇ. 100ರ ಗುರಿ ತಲುಪಲೇಬೇಕು, ಅದಕ್ಕಾಗಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು, ಬಿಲ್ ಕಲೆಕ್ಟರ್ಗಳು, ನೀರುಗಂಟಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜನ ಪ್ರತಿನಿಧಿಗಳು, ಆರೋಗ್ಯ ನಿರೀಕ್ಷಕರು, ವೈದ್ಯಾಧಿಕಾರಿಗಳೊಂದಿಗೆ ಸಂಬಂಧಿಸಿದವರೆಲ್ಲರೂ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು. ಜಿಲ್ಲೆಯ ಶೇ.96% ಜನರಿಗೆ ಲಸಿಕೆ ನೀಡಿರುವ ಕಾರಣ ಕೋವಿಡ್ ಅಥವಾ ಓಮಿಕ್ರಾನ್ ಸೋಂಕು ಕಂಡುಬಂದರೂ ಅವರಲ್ಲಿ ಆಸ್ಪತ್ರೆಗೆ ದಾಖಲಾಗುವ ಗಂಭೀರತೆ ಕಡಿಮೆ ಪ್ರಮಾಣದಲ್ಲಿರುತ್ತದೆ. ವ್ಯಾಕ್ಸಿನ್ ಪಡೆಯದವರನ್ನು ಪತ್ತೆ ಹಚ್ಚಲು ಪ್ರತಿ ಮನೆ ಮನೆಯನ್ನೂ ಪರಿಶೀಲಿಸಬೇಕು. ಜನರಿಗೆ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಕೊಡಿಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿ ಅವರಿಗೆ ವ್ಯಾಕ್ಸಿನ್ ನೀಡುವ ಮೂಲಕ ಶೇ. 100ರಷ್ಟು ಗುರಿ ಸಾಧಿಸಬೇಕು, ಇದಕ್ಕಾಗಿ ಫೀಲ್ಡ್ಗೆ ಇಳಿದು ಕೆಲಸ ಮಾಡಬೇಕು.15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಯುದ್ದೋಪಾದಿಯಲ್ಲಿ ಲಸಿಕೆ ಕೊಡಿಸಬೇಕು. ಜನ ಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈ ಜೋಡಿಸಬೇಕು, ಕ್ಷೇತ್ರದ ಅಭಿವೃದ್ಧಿಗೆ ಆಯಾ ಪ್ರದೇಶವಾರು ಸಂಪೂರ್ಣ ಲಸಿಕೆ ಕೊಡಿಸುವುದು ಸಂಬಂಧಿಸಿದ ಜನಪ್ರತಿನಿಧಿಗಳ ಜವಬ್ದಾರಿಯಾಗಿದೆ. ತಾಲೂಕು ಮಟ್ಟದಲ್ಲಿ ಈ ಪ್ರಕ್ರಿಯೆಗೆ ವಾಹನಗಳ ಅಗತ್ಯವಿದ್ದರೆ ತಹಶಿಲ್ದಾರರ ಮೂಲಕ ಪಡೆದುಕೊಳ್ಳುವಂತೆ ಅವರು ತಿಳಿಸಿದರು. ಕೋವಿಡ್ ನಿರ್ವಹಣೆ, ಟ್ರಾಯಾಜಿಂಗ್, ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವಿಕೆ ಆಗಬೇಕು, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ನಡೆ-ಹಳ್ಳಿಯ ಕಡೆ ಕಾರ್ಯಕ್ರಮವನ್ನು ಪುನಃ ಆರಂಬಿಸಬೇಕು, ಮಾಸ್ಕ್, ಗ್ಲೌಸ್ಗಳ ಅಗತ್ಯವಿದ್ದರೆ ತಹಶೀಲ್ದಾರರ ಮೂಲಕ ಬೇಡಿಕೆ ಸಲ್ಲಿಸಬೇಕು. ಎಲ್ಲಿಯೂ ಯಾವುದೇ ಕೊರತೆ ಕಂಡುಬರಬಾರದು.
ಜಿಲ್ಲೆಯ ಶಾಲೆಗಳಲ್ಲಿ 5 ಕ್ಕಿಂತ ಹೆಚ್ವು ಕೋವಿಡ್ ಪ್ರಕರಣ
ದಾಖಲಾದರೆ ಆ ಶಾಲೆಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಬೇಕು, ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ತದನಂತರ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ನಂತರ ಶಾಲೆ ಆರಂಭಿಸಬೇಕು. ಆದರೆ ಜಿಲ್ಲೆಯಾದ್ಯಂತ ಶಾಲೆಗೆ ರಜೆ ಘೋಷಿಸಿರುವುದಿಲ್ಲ ಎಂದ ಜಿಲ್ಲಾಧಿಕಾರಿ ಕೌಟುಂಬಿಕ ಕಾರ್ಯಕ್ರಮಗಳು, ಮದುವೆ, ಹರಕೆ ಇತ್ಯಾದಿ ಪೂರ್ವ ನಿರ್ಧರಿತ ಕಾರ್ಯಕ್ರಮಗಳನ್ನ ಮಾರ್ಗಸೂಚಿಗಳಂತೆ ನಿರ್ವಹಿಸಬೇಕು, ಗ್ರಾಮ ಮಟ್ಟದಲ್ಲಿ ಬೃಹತ್ ಜಾತ್ರೆ, ಉರುಸ್ ಗಳಿಗೆ ಅನುಮತಿಯಿಲ್ಲ. ಆಯಾ ದೇವಸ್ಥಾನಗಳ ಸಮಿತಿಯವರು ಮಾತ್ರ ಸೇರಿ ಜಾತ್ರೆ ಅಥವಾ ಉರೂಸ್ ಮಾಡಬಹುದು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಜಿಲ್ಲೆಯ ಬಂಟ್ವಾಳ 16 ಸಾವಿರ, ಬೆಳ್ತಂಗಡಿ 19 ಸಾವಿರ, ಮಂಗಳೂರು 21 ಸಾವಿರ, ಪುತ್ತೂರು 26 ಸಾವಿರ, ಸುಳ್ಯ 10 ಸಾವಿರ ಸೇರಿದಂತೆ ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆಯಲು ಇನ್ನೂ 95 ಸಾವಿರ ಜನರು ಬಾಕಿ ಉಳಿದಿದ್ದಾರೆ. ಅವರಿಗೆ ಲಸಿಕೆ ನೀಡಲು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಉಪಕೇಂದ್ರಗಳು ಗುರಿ ನಿಗದಿಪಡಿಸಲಾಗಿದೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಬಿಲ್ ಕಲೆಕ್ಟರ್ಗಳು ಸೇರಿದಂತೆ ಸಂಬಂಧಿಸಿದ ಸಿಬ್ಬಂದಿಗಳು ಮನೆ-ಮನೆಗೆ ಬೇಟಿ ನೀಡಿ ಲಸಿಕೆ ಪಡೆಯದವರ ಪಟ್ಟಿ ತಯಾರಿಸಿ ಲಸಿಕೆ ಕೊಡಿಸಬೇಕು ಎಂದು ಸೂಚಿಸಿದರು.
ಗ್ರಾಮ ಮಟ್ಟದಲ್ಲಿರುವ ಟಾಸ್ಕ್ಪೋರ್ಸ್ ಸಮಿತಿಯ ಸದಸ್ಯರು ಹಾಗೂ ಜನ ಪ್ರತಿನಿಧಿಗಳು ಹೆಚ್ಚಿನ ಜಾಗೃತಿ ಮಾಡಿಸಬೇಕು. ತಳ ಮಟ್ಟದಲ್ಲಿ ಇಳಿದು, ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವಾಗಿ ಕೆಲಸ ಮಾಡಬೇಕು ಎಂದರು. ಜ.31ರೊಳಗೆ ನೂರರಷ್ಟು ಲಸಿಕೆ ನೀಡುವ ಕಾರ್ಯ ಪೂರ್ಣಗೊಳ್ಳಬೇಕು, ಅದಕ್ಕಾಗಿ ಅಧಿಕಾರಿ, ಸಿಬ್ಬಂದಿಗಳ ಕಾರ್ಯವನ್ನು ಪರಿಶೀಲಿಸಲಾಗುವುದು, 1.80 ಲಕ್ಷ ಜನರಿಗೆ ಎರಡನೇ ಡೋಸ್ ಬಾಕಿ ಉಳಿದಿದ್ದು, ಅವರುಗಳು ಯಾರೂ ಎನ್ನುವುದು ತಿಳಿದಿದೆ, ಅವರ ಹೆಸರು, ಮೊಬೈಲ್ ಹಾಗೂ ವಿಳಾಸದ ಮಾಹಿತಿ ಲಭ್ಯವಿದೆ, ಅವರನ್ನು ಕೂಡಲೇ ಪತ್ತೆ ಮಾಡಿ ಲಸಿಕೆ ಕೊಡಿಸಬೇಕು. 6 ದಿನದೊಳಗೆ ಈ ಕಾರ್ಯ ಪೂರ್ಣಗೊಳ್ಳಬೇಕು. 16-18 ವರ್ಷದ ಶೇ.75 ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಬಾಕಿ ಉಳಿದ 28 ಸಾವಿರ ವಿದ್ಯಾರ್ಥಿಗಳಿಗೆ ಕಾಲೇಜು, ಶಾಲೆಗಳಿಗೆ ಹೋಗಿ ಅಲ್ಲಿಯೇ ಲಸಿಕೆ ನೀಡುವಂತೆ ಅವರು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.
ಜಿಲ್ಲೆಯ ಸಹಾಯಕ ಆಯುಕ್ತರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಚ್ಯೂವಲ್ ಮಾಧ್ಯಮದ ಮೂಲಕ ಭಾಗವಹಿಸಿದ್ದರು.