ಸುಳ್ಯ:ಸುಳ್ಯ ತಾಲೂಕಿನಲ್ಲಿ ಜ್ವರ ಬಾದೆ ವ್ಯಾಪಕವಾಗಿ ಹರಡುತಿದೆ.ಸುಳ್ಯ ನಗರ ಮತ್ತು ಗ್ರಾಮಗಳೂ ಸೇರಿದಂತೆ ಎಲ್ಲೆಡೆ ವ್ಯರಲ್ ಜ್ವರ ತಾಂಡವವಾಡುತಿದೆ. ಎಲ್ಲೆಡೆ ವೈರಲ್ ಜ್ವರ ಕಂಡು ಬಂದಿದ್ದುಎಲ್ಲಾ ಪ್ರಾಯದವರನ್ನೂ ಹಾಸಿಗೆ ಹಿಡಿಸುತಿದೆ. ಜ್ವರ,ತಲೆ ನೋವು,ಶೀತ, ಕೆಮ್ಮು, ಗಂಟಲು ನೋವು ಮೈ ಕೈ ನೋವಿನಿಂದ ಜನರು ಬಳಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ದಿನ ಹೊರ
ರೋಗಿಗಳಾಗಿ ಚಿಕಿತ್ಸೆಗಾಗಿ ಜ್ವರ ಬಾದಿಸಿ 30-35 ಮಂದಿ ಆಗಮಿಸುತ್ತಾರೆ. ತಾಲೂಕು ಆಸ್ಪತ್ರೆ, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಖಾಸಗೀ ಆಸ್ಪತ್ರೆ, ಕ್ಲಿನಿಕ್ಗಳಲ್ಲಿ ಉದ್ದನೆಯ ಸರತಿ ಕಂಡು ಬರುತ್ತಿದ್ದು ಹೆಚ್ಚಿನವರು ಜ್ವರ ಬಾದೆಯಿಂದಲೇ ಬರುತ್ತಾರೆ.
ಗಂಭೀರ ಸ್ವರೂಪ ಇಲ್ಲ:
ಜ್ವರ ಬಾದಿಸಿ ಹೆಚ್ಚು ಮಂದಿ ಬಳಲುತ್ತಿದ್ದರೂ ಗಂಭೀರ ಸ್ವರೂಪ ಇಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜ್ವರ,ಶೀತ, ತಲೆನೋವು ಬಾದಿಸಿದವರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗುತಿದೆ. ಆದರೆ ಬಹುತೇಕ ವರದಿ ನೆಗೆಟಿವ್ ಬರುತ್ತಿದೆ. ಮಾತ್ರವಲ್ಲದೆ ಜ್ವರ ಬಾದಿಸಿ ಒಳರೋಗಿಗಳಾಗಿ ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆಯೂ ಕಡಿಮೆ ಇದೆ. ಸುಳ್ಯ ತಾಲೂಕಿನಲ್ಲಿ ಅಲ್ಲಲ್ಲಿ ಒಂದೊಂದು ಕೋವಿಡ್ ಪಾಸಿಟಿವ್ ಅಸ್ಟೇ ಕಂಡು ಬರುತಿದೆ.ತಾಲೂಕಿನಲ್ಲಿ ಜ.24 ರಂದು 8 ಕೋವಿಡ್ ಪಾಸಿಟಿವ್ ಬಂದಿತ್ತು. ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಜ್ವರ ಬಾದೆಯಿಂದ 15 ಮಂದಿ ಒಳರೋಗಿಗಳಾಗಿ ಚಿಕಿತ್ಸೆಯಲ್ಲಿದ್ದಾರೆ.ಒಬ್ಬರು ಮಾತ್ರ ಕೋವಿಡ್ ಪಾಸಿಟಿವ್ ಆಗಿ ಚಿಕಿತ್ಸೆಯಲ್ಲಿದ್ದಾರೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ತಿಳಿಸಿದ್ದಾರೆ. ಸರಿಯಾಗಿ ಔಷಧಿ ವಿಶ್ರಾಂತಿ ಪಡೆದುಕೊಂಡರೆ ಬೇಗನೇ ಗುಣ ಮುಖರಾಗುತ್ತಾರೆ. ಗಂಭೀರ ಸ್ವರೂಪಕ್ಕೆ ಹೋಗುವುದಿಲ್ಲ. ಕೋವಿಡ್ ವರದಿ ನೆಗೆಟಿವ್ ಬರುತಿದೆ. ಡೆಂಗ್ಯು ಮತ್ತಿತರ ಯಾವುದೇ ಗಂಭೀರ ಸ್ವರೂಪದ ಜ್ವರದ ಲಕ್ಷಣ ಕಂಡು ಬರುತ್ತಿಲ್ಲ. ವೈರಲ್ ಜ್ವರವೇ ಹೆಚ್ಚಾಗಿ ಕಂಡು ಬಂದಿದೆ ಎನ್ನುತ್ತಾರೆ ಡಾ.ಕರುಣಾಕರ.
ಹವಾಮಾನ ವೈಪರೀತ್ಯ ಕಾರಣ:
ಹವಾಮಾನ ವೈಪರೀತ್ಯ, ಚಳಿ, ನೀರಿನ ಕಾರಣಗಳಿಂದ ವೈರಲ್
ಜ್ವರ ಹರಡುವ ಸಾಧ್ಯತೆ ಇದೆ. ರಾತ್ರಿ ಮತ್ತು ಬೆಳಗ್ಗಿನ ಜಾವ ಚಳಿ, ಮಂಜು ಇರುವ ಕಾರಣ ಶೀತ, ಜ್ವರ ಕಂಡು ಬರಲು ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಗಾಬರಿ ಬೇಡ: ಜಾಗೃತಿ ವಹಿಸಿ:
ಎಲ್ಲೆಡೆ ವೈರಲ್ ಜ್ವರ ವ್ಯಾಪಿಸಿದ್ದರೂ ಜನರು ಗಾಬರಿ ಪಡಬೇಕಾಗಿಲ್ಲ. ಜಾಗೃತಿ ವಹಿಸಿ ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಬಿ. ಹೇಳಿದ್ದಾರೆ. ಜ್ವರ ಬಂದರೆ ವೈದ್ಯರ ಸೂಚನೆಯಂತೆ ಸರಿಯಾಗಿ ಔಷಧಿ ಸೇವಿಸಿ ವಿಶ್ರಾಂತಿ ಪಡೆಯಬೇಕು. ಕುದಿಸಿ ಆರಿಸಿದ ನೀರನ್ನೇ ಬಳಸಬೇಕು. ಜ್ವರದ ಲಕ್ಷಣ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆಗೆ ಒಳಪಡಬೇಕು ಮತ್ತು ಔಷಧಿ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.