*ಗಂಗಾಧರ ಕಲ್ಲಪಳ್ಳಿ
ಸುಳ್ಯ: ಕಟ್ಟುತ್ತೇವಾ.. ನಾವು ಸ್ವಚ್ಛ ಮನಸ್ಸಿನ, ಆರೋಗ್ಯ ಕನಸಿನ ಗ್ರಾಮ ಕಟ್ಟುತ್ತೇವಾ… ಆರೋಗ್ಯ ಭಾಗ್ಯದ ನಾಡ ಕಟ್ಟುತ್ತೇವೆ.. ಹೀಗೆ ಕಲಾವಿದರು ಹಾಡಿ ಕುಣಿಯುತ್ತಿದ್ದರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆರೋಗ್ಯವನ್ನೂ, ಬದುಕನ್ನು ಕಾಪಾಡಲು, ಆರೋಗ್ಯವಂತ ನಾಡಿಗಾಗಿ ನಾವು ಪಡಬೇಕಾಗಿ ಬಂದ ಸವಾಲುಗಳು ಕಣ್ಣ ಮುಂದೆ ಸರಿದು ಹೋಗುತ್ತದೆ.. ಮಾನವ ಕುಲಕ್ಕೆ ಹೆಮ್ಮಾರಿಯಾಗಿ ಕಾಣಿಸಿಕೊಂಡ..ಕೊರೊನಾ ಅದರ ರೂಪಾಂತರಿ ವೈರಸ್ಗಳು ಅಕ್ಷರಷಃ

ಜಗತ್ತಿನ ಆರೋಗ್ಯಕ್ಕೆ ಸವಾಲಾಗಿದೆ. ಇದಕ್ಕೆ ರಾಮಬಾಣವಾಗಿ ಅವತರಿಸಿರುವುದು ಕೋವಿಡ್ ಲಸಿಕೆ. ಈ ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರೂ ಪಡೆಯುವಂತಾಗಲು ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಾವಿದರು ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಡಿ ಕುಣಿದು, ಬೀದಿ ನಾಟಕದ ಮೂಲಕ ಲಸಿಕಾ ಅಭಿಯಾನದ ಸಂದೇಶ ಸಾರಿದ್ದಾರೆ. ಎಲ್ಲರೂ ಲಸಿಕೆ ಪಡೆಯುವಂತಾಗಬೇಕು ಎಂಬ ದೃಷ್ಠಿಯಿಂದ ಬೀದಿ ನಾಟಕದ ಮೂಲಕ ಆರೋಗ್ಯ ಜಾಗೃತಿ ಅಭಿಯಾನವನ್ನು ನಡೆಸಲಾಗುತಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಪತ್ರಕರ್ತ, ರಂಗಕಲಾವಿದ ಸಂಶುದ್ಧೀನ್ ಸಂಪ್ಯ ನೇತೃತ್ವದ ಪುತ್ತೂರಿನ ಸಂಸಾರ ನಾಟಕ ತಂಡ ಆರೋಗ್ಯ ಜಾಗೃತಿಗಾಗಿ ಬೀದಿ ನಾಟಕವನ್ನು ಪ್ರಸ್ತುತಪಡಿಸಿತು. ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾಗಿಸಲು

ಮತ್ತು ಆರೋಗ್ಯ ಜಾಗೃತಿ ಅಭಿಯಾನಕ್ಕಾಗಿ ಆರೋಗ್ಯ ಇಲಾಖೆ ಹಲವು ಮಾಧ್ಯಮಗಳನ್ನು ಬಳಸಿಕೊಳ್ಳುತಿದೆ.ಅದರಲ್ಲಿ ಗ್ರಾಮೀಣ ಭಾಗದಲ್ಲಿ ಜಾಗೃತಿಗಾಗಿ ಬೀದಿ ನಾಟಕಗಳನ್ನು ಪ್ರಸ್ತುತಪಡಿಸಲಾಗುತಿದೆ.ಸುಳ್ಯ ತಾಲೂಕಿನ ಆರು ಪ್ರಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಾಟಕಗಳನ್ನು ಪ್ರಸ್ತುತಪಡಿಸಲಾಗುತ್ತದೆ.
ಸ್ವಚ್ಛತೆಯ ಸಂದೇಶ ಸಾರುವ ಆರೋಗ್ಯ ಭಾಗ್ಯದ ಆಶಯ ಗೀತೆಯೊಂದಿಗೆ ಆರಂಭವಾಗುವ 45 ನಿಮಿಷದ ನಾಟಕ ಸ್ವಾರಷ್ಯಕರವಾಗಿ ಹಾಡು, ಸಂಭಾಷಣೆ, ನೃತ್ಯದ ಮೂಲಕ ಮನೋಜ್ಞವಾಗಿ ಪ್ರದರ್ಶಿಸಲಾಯಿತು. ಕೊರೋನಾ ವೈರಸ್ನ ಅಟ್ಟಹಾಸವನ್ನು ಮೆಟ್ಟಿ ನಿಲ್ಲುವ ಲಸಿಕೆಯ ಪ್ರಭಾವ ನಾಟಕದ ಒಟ್ಟು ಸಾರಾಂಶ. ಕೊರೋನಾ ಮತ್ತು ಲಸಿಕೆ ಪಾತ್ರಗಳಾಗಿ ರಂಗದ ಮೇಲೆ ಬಂದು ನಡೆಸುವ ಸಂಭಾಷಣೆ ಮಾರ್ಮಿಕವಾಗಿ ಮೂಡಿ ಬಂದಿದೆ. ಎಲ್ಲರೂ ಪ್ರಥಮ ಡೋಸ್, ಎರಡನೇ ಮತ್ತು ಬೂಸ್ಟರ್ ಲಸಿಕೆ

ಪಡೆಯಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದೆ. ಲಸಿಕೆ ಪಡೆದವರು ಕೊರೋನಾವನ್ನು ಒದ್ದೋಡಿಸುವ ಮತ್ತು ಲಸಿಕೆ ಪಡೆಯದವರನ್ನು ಕೊರೊನಾ ವೈರಸ್ ಗುರಿಯಾಗಿಸುವ ಚಿತ್ರಣವನ್ನು ಆಕರ್ಷಕವಾಗಿ ಮೂಡಿಸಲಾಗಿದೆ. ಜೊತೆಗೆ ಸಂಭಾಷಣೆ, ಹಾಡುಗಳ ಮತ್ತು ದೃಶ್ಯಗಳ ಮೂಲಕ ಮಾಸ್ಕ್ ಧರಿಸಬೇಕಾದ, ಸಾಮಾಜಿಕ ಅಂತರ ಪಾಲಿಸಬೇಕಾದ ಮತ್ತು ಸ್ವಚ್ಛತೆಯನ್ನು ಪಾಲಿಸಬೇಕಾದ ಅಗತ್ಯತೆಯನ್ನು ನಾಟಕದ ಮೂಲಕ ವಿವರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯದ ಬಗ್ಗೆ, ಕ್ಷೇಮ ಕೇಂದ್ರದ ಬಗ್ಗೆ ನಾಟಕದಲ್ಲಿ ತಿಳಿ ಹೇಳಲಾಗಿದೆ.ಮನುಷ್ಯರನ್ನು ಕಾಡುವ ಕ್ಷಯ ಮತ್ತು ಇತರ ರೋಗ ರುಜಿನಗಳ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗುತಿದೆ. ಸಂಶುದ್ದೀನ್ ಸಂಪ್ಯ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ನಾಟಕದಲ್ಲಿ ಕಲಾವಿದರಾದ ಕೃಷ್ಣಪ್ಪ ಬಂಬಿಲ, ಚಿರಶ್ರೀ, ಮಧುಶ್ರೀ, ಚಂದ್ರಮೌಲಿ, ರವಿ ಎಂ.ಪೆರ್ಲಂಪಾಡಿ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತಾರೆ. ಸಂಶುದ್ದೀನ್ ಮತ್ತು ಕೃಷ್ಣಪ್ಪ ಬಂಬಿಲ ಹಾಡುಗಳನ್ನು ಸಂಯೋಜಿಸಿ ಹಾಡಿದ್ದಾರೆ.
ಸುಳ್ಯ ತಾಲೂಕಿನ ಅರಂತೋಡು ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ನಾಟಕದ

ಸಂದರ್ಭದಲ್ಲಿ ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಸೀತಾರಾಮ, ಅರಂತೋಡು ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಪವನ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಅರಂತೋಡು,ಬೆಳ್ಳಾರೆ, ಪಂಜ,ಗುತ್ತಿಗಾರು, ಸುಬ್ರಹ್ಮಣ್ಯ, ಕೊಲ್ಲಮೊಗ್ರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಾಟಕ ಪ್ರದರ್ಶನಗೊಂಡಿತು. ಸುಳ್ಯ, ಪುತ್ತೂರು,ಕಡಬ, ಮಂಗಳೂರು ತಾಲೂಕುಗಳಲ್ಲಿ ಸುಮಾರು 50 ಕ್ಕೂ ಅಧಿಕ ಆರೋಗ್ಯ ಜಾಗೃತಿ ಪ್ರದರ್ಶನವನ್ನು ಸಂಸಾರ ತಂಡ ನೀಡಲಿದೆ.