ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮುಂಬೈನ ಶಿವಾಜಿ ಪಾರ್ಕ್ ಮೈದಾನದಲ್ಲಿ ನೆರವೇರಿಸಲಾಯಿತು. ಈ ಮೂಲಕ ಗಾನ ಕೋಗಿಲೆ ಲತಾ ಮಂಗೇಶ್ಕರ್ ಪಂಚ ಭೂತಗಳಲ್ಲಿ ಲೀನವಾದರು. ಪ್ರಧಾನಿ ಮೋದಿ, ಸಚಿನ್ ತೆಂಡೂಲ್ಕರ್ ದಂಪತಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ನಟ ಅಮಿರ್
ಖಾನ್ ಸೇರಿ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.ಮುಂಬೈನ ಶಿವಾಜಿ ಪಾರ್ಕ್ನಲ್ಲಿ ದುಃಖದ ಛಾಯೆ ಆವರಿಸಿತ್ತು. ಲತಾ ಮಂಗೇಶ್ಕರ್ ಅವರ ದಕ್ಷಿಣ ಮುಂಬೈನಲ್ಲಿರುವ ನಿವಾಸದಿಂದ ಶಿವಾಜಿ ಪಾರ್ಕ್ವರೆಗೆ ಭಾನುವಾರ ನಡೆದ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಅಭಿಮಾನಿಗಳು, ‘ಲತಾ ದೀದಿ ಅಮರ್ ರಹೆ’ ಎಂಬ ಘೋಷಣೆ ಕೂಗುತ್ತಾ, ಹಾಡು ಹಾಡುತ್ತಾ ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ವಿದಾಯ ಕೋರಿದರು.ಅದಕ್ಕೂ ಮುನ್ನ ಲತಾ ಅವರ ನಿವಾಸ ಪ್ರಭು ಕುಂಜ್ಗೆ ಯುವಕರು, ಹಿರಿಯರೆನ್ನದೆ ನೂರಾರು ಮಂದಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.