ಸುಳ್ಯ:ಆದರ್ಶ ಕಾರ್ಯಕರ್ತನಾಗಿ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ ರಾಜಕೀಯ ಕ್ಷೇತ್ರದ ಅಜಾತಶತ್ರು ಉಮೇಶ್ ವಾಗ್ಲೆಯವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ. ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆದ ಇತ್ತೀಚಿಗೆ ನಿಧನರಾದ ಹಿರಿಯ ಬಿಜೆಪಿ ಮುಖಂಡ ಆರ್.ಉಮೇಶ್ ವಾಗ್ಲೆಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ

ನುಡಿನಮನ ಸಲ್ಲಿಸಿ ಅವರು ಮಾತನಾಡಿದರು. ವಾಗ್ಲೆಯವರು ಸಮಾಜದ ಕಾಳಜಿ ಮತ್ತು ತನ್ನ ಜವಾಬ್ದಾರಿಯ ನಿರ್ವಹಣೆಯಿಂದ ಎಲ್ಲರ ಹೃದಯ ಗೆದ್ದಿದ್ದಾರೆ ಎಂದು ಹೇಳಿದರು.ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ಅಧಿಕಾರಕ್ಕೆ ಅಪೇಕ್ಷೆ ಪಡದೆ ಕರ್ತವ್ಯಕ್ಕೆ ಮಹತ್ವ ಕೊಟ್ಟವರು ವಾಗ್ಲೆಯವರು ಎಂದು ಸ್ಮರಿಸಿದರು. ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದ ಅವರು ಅಭಿವೃದ್ಧಿಗೆ ಪೂರಕವಾಗಿ ಚಿಂತನೆ ನಡೆಸುತ್ತಿದ್ದರು. ಸಂಘಟನೆಗೆ ಮತ್ತು

ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದರು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ಆರ್ಎಸ್ಎಸ್ ಸಂಘಚಾಲಕ ಚಂದ್ರಶೇಖರ ತಳೂರು, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ವಾಣೀಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಮತ್ತಿತರರು

ನುಡಿನಮನ ಸಲ್ಲಿಸಿದರು. ಜಿ.ಜಿ.ನಾಯಕ್ ಸ್ವಾಗತಿಸಿ, ಪಿ.ಕೆ.ಉಮೇಶ್ ವಂದಿಸಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗು ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.
ಮೌನ ಪ್ರಾರ್ಥನೆ ಮಾಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

